ಉಡುಪಿ: ಪುರುಷ ಜನನೇಂದ್ರಿಯ ಆಕಾರವನ್ನು ಹೋಲುವ ಪ್ರಾಚೀನ ಲಿಂಗ ಹಾಗೂ ಮಹಿಷಮರ್ಧಿನಿಯ ಕಂಚಿನ ಮೂರ್ತಿ ಕೇರಳದ ಕಾಸರಗೋಡಿನ ಕುಂಬ್ಡಾಜೆ ಗ್ರಾಮದ ಗೋಸಾಡ ಮಹಿಷಮರ್ಧಿನಿ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.
ಎರಡು ಅಡಿ ಎತ್ತರದ ತ್ರಿಕೋನ ಆಕಾರದಲ್ಲಿರುವ ಲಿಂಗವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಪ್ರಾಚೀನ ಶಿಶ್ನ ಆರಾಧನ ಪಂಥದ ಸ್ಪಷ್ಟ ಹಾಗೂ ಖಚಿತ ಸಾಕ್ಷ್ಯ ಇದಾಗಿದೆ. ಇದು ಗುಂಡಿಲಿಂಗಂನಲ್ಲಿ ದೊರೆತಿರುವ ಲಿಂಗಕ್ಕಿಂತ ಪ್ರಾಚೀನವಾಗಿದ್ದು ಕ್ರಿ.ಪೂ 56ನೇ ಶತಮಾನದಷ್ಟು ಹಳೆಯದಾಗಿದೆ. ಆದ್ದರಿಂದ ಇದೇ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಲಿಂಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೋಸಾಡಿ ಮಹಿಷಮರ್ಧಿನಿ ದೇವಾಲಯ ಮಂಡಲಾಕಾರದ ವಾಸ್ತುವನ್ನು ಹೊಂದಿದೆ. ದೇವಾಲಯದ ಅಧಿದೇವತೆಯ ಶಿಲ್ಪ ಚೋಳ ಶೈಲಿಯಲ್ಲಿದ್ದು ಚತುರ್ಭುಜ ಮೂರ್ತಿಯಾಗಿದೆ. ಹಿಂಭಾಗದ ಕೈಗಳಲ್ಲಿ ಪ್ರಯೋಗ ಚಕ್ರ, ಶಂಖ, ಮುಂದಿನ ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಂತೆ ಚಿತ್ರಿಸಲಾಗಿದೆ. ಮುಂದಿನ ಎಡಗೈಯನ್ನು ದೇಹಕ್ಕೆ ಸಮಾನಾಂತರವಾಗಿ ಇಳಿಬಿಡಲಾಗಿದೆ. ಎಡಗೈ ತೋರು ಬೆರಳು ಭೂಮುಖವಾಗಿದೆ. ಇದು ದೇವಿ ಧರಣೇಂದ್ರೆ ಎಂಬುದನ್ನು ಸಂಕೇತಿಸುತ್ತದೆ. ಇದು ಮೂಲತಃ ಬೌದ್ಧ ಧರಣೇಂದ್ರ ಬುದ್ಧನ ಮುದ್ರೆಯಾಗಿದ್ದು, ಇದನ್ನು ಬೌದ್ಧ ಶಿಲ್ಪಗಳಿಂದ ತೆಗೆದುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.