ADVERTISEMENT

ಮೋಡಿ ಮಾಡೀತೇ ಮೋದಿ ಅಲೆ?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 11:31 IST
Last Updated 27 ಮಾರ್ಚ್ 2014, 11:31 IST
ಮೋಡಿ ಮಾಡೀತೇ ಮೋದಿ ಅಲೆ?
ಮೋಡಿ ಮಾಡೀತೇ ಮೋದಿ ಅಲೆ?   

ಉಡುಪಿ: ಮಲ್ಪೆ ಸಮುದ್ರ ತೀರದ ಶೆಡ್ ಕೆಳಗೆ ಕುಳಿತ ಐದಾರು ಮೀನುಗಾರರು ಇಸ್ಪೀಟ್ ಆಡುತ್ತಿದ್ದರು. ‘ಚುನಾವಣೆಯ ಕಾವು ಹೇಗಿದೆ’ ಎಂದು ಪ್ರಶ್ನಿಸಿದಾಗ, ‘ನಾವೆಲ್ಲ ಬಿಜೆಪಿಗೆ ಮತ ಹಾಕುವುದು’ ಎಂಬ ಸ್ಪಷ್ಟ ಉತ್ತರ ಬಂತು.

‘ಕಾಂಗ್ರೆಸ್‌ಗಿಂತ ಬಿಜೆಪಿ ಅಭ್ಯರ್ಥಿ ಚೆನ್ನಾಗಿದ್ದಾರಾ?’ ಎಂಬ ಪ್ರಶ್ನೆಗೆ, ‘ಬಿಜೆಪಿ ಮುಖ್ಯವಲ್ಲ. ಮೋದಿ ಬರಬೇಕು’ ಎಂಬ ಖಡಕ್ ಮಾತು. ಸಮುದ್ರಕ್ಕೆ ಇಳಿಯಲು ದೋಣಿಗೆ ಡೀಸೆಲ್ ತುಂಬಿಸುತ್ತಿದ್ದ ಯುವಕ ಮಿಥುನ್ ಮಲ್ಪೆ, ‘ದೇಶಕ್ಕೆ ಬದಲಾವಣೆ ಬೇಕಿದೆ’ ಎಂದರು. ಪಕ್ಕದಲ್ಲೇ ಇದ್ದ ಹಿರಿಯ ಲೋಕೇಶ್ ಕುಮಾರ್, ‘ನಮ್ಮದು ಕಾಂಗ್ರೆಸ್ಸೇ, ಆದ್ರೆ ಈ ಸಲ ಬಿಜೆಪಿಗೆ ಹಾಕುವಾ ಅಂತಾ’ ಎಂದು ರಾಗ ಎಳೆದರು.

ದೋಣಿಯಿಂದ ಮೀನು ಇಳಿಸುತ್ತಿದ್ದ, ಬಲೆ ಬಿಡಿಸುತ್ತಿದ್ದ ಯಾರನ್ನೂ ಕೇಳಿ­ದರೂ ‘ಮೋದಿಗೆ ನಮ್ಮ ಮತ’ ಎಂಬ ಉತ್ತರವೇ ಸಿಗುತ್ತಿತ್ತು.

‘ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್ ನಿಮ್ಮ ಸಮುದಾಯಕ್ಕೆ (ಮೊಗ­ವೀರ) ಸೇರಿದವರಲ್ಲವೇ? ಜಯ­ಪ್ರಕಾಶ್ ಹೆಗ್ಡೆ ಒಳ್ಳೆಯವರು ಎಂಬ ಮಾತಿದೆಯಲ್ಲ’ ಎಂದರೆ, ‘ಅವರು ಮೂರು ಸಲ ಸೋತಿದ್ರಲ್ಲ. ಹಾಗೆ ಅವ್ರಿಗೆ ಮತ ಕೊಟ್ಟಿದ್ದೆವು. ಸೆಂಟರ್‌ನಲ್ಲಿ ಬಿಜೆಪಿ ಬರಬೇಕು’ ಎಂಬ ಉತ್ತರವೇ ಮತ್ತೆ ಸಿಕ್ಕಿತು.

ಪಡುಬಿದ್ರೆ ಸಮೀಪ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಶಾಖೋ­ತ್ಪನ್ನ ವಿದ್ಯುತ್‌ ಸ್ಥಾವರ ಇರುವ ನಂದಿ­ಕೂರಿಗೆ ಬಂದಾಗ, ಉಷ್ಣ ವಿದ್ಯುತ್ ಸ್ಥಾವ­ರದ ವಿರುದ್ಧ ಹೋರಾಟ ನಡೆಸು­ತ್ತಿ­ರುವ ಜನ ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ­ಕುಮಾರ್ ಉಪಾಧ್ಯ ಭೇಟಿಯಾದರು.

‘ಈ ಸಲ ಇಲ್ಲಿ ಎಲ್ಲರೂ ಬಿಜೆಪಿಗೆ ಮತ ಹಾಕುವುದು’ ಅಂದರು ಅವರು. ‘ಇಲ್ಲಿಯೂ ಮೋದಿ ಪ್ರಭಾವ ಇದೆಯಾ’ ಎಂದರೆ, ‘ಅಲ್ಲ, ಶೋಭಾ ಬೆಸ್ಟ್ ಕ್ಯಾಂಡಿಡೇಟ್. ಪವರ್ ಮಿನಿಸ್ಟರ್‌ ಆಗಿದ್ದಾಗ ಸ್ಥಾವರದ್ದು ಒಂದ್ ಘಟಕ ಕೆಲ್ಸ್ ಮಾಡ್ದಾಗೆ ತಡೆ ಕೊಟ್ರು. ಈ ಕಂಪೆನಿಯವ್ರು ಮಾಲಿನ್ಯ ಮಾಡ್ತಿದಾರೆ ಅಂತ ಅವ್ರಿಂದ್ ಕಡ್ಮೆ ದುಡ್ಡಿಗೆ ಪವರ್ ತಕ್ಕೊಂಡ್ರು. ಇದ್ರ್ (ಉಷ್ಣ ಸ್ಥಾವರ) ಗಲಾಟೆ ಇತ್ತಲ್ಲ. ಕುಮಾರ್‌ಸ್ವಾಮಿ ಸಿ ಎಂ ಆದಾಗ ಎಲ್ಲಾ ಎಮ್ಮೆಲ್ಲೆಗಳ ಸಭೆ ಮಾಡಿದ್ರು. ಜಯಪ್ರಕಾಶ್ ಹೆಗ್ಡೆ ಬಿಟ್ಟು ಎಲ್ಲಾ ಎಮ್ಮೆಲ್ಲೆಗಳು ಸ್ಥಾವರ ಅಪೋಸ್ ಮಾಡಿದ್ರು. ಯಾಕಂದ್ರೆ ಇದು ನಾಗಾ ರ್ಜುನ ಕಂಪೆನಿದ್ದು. ಆಂಧ್ರದ ಕಾಂಗ್ರೆಸ್ ಎಂಪಿದ್ದು. ನೋಡಿ ಅವ್ರು ಒಳಗೊಳ್ಗೆ ಅವ್ರ ಪರ’ ಎನ್ನುತ್ತ ಮಾತು ನಿಲ್ಲಿಸಿದರು.

ಉಷ್ಣ ವಿದ್ಯುತ್ ಸ್ಥಾವರದಿಂದ ಹೊರ ಬರುವ ಉಪ್ಪುಮಿಶ್ರಿತ ಹಬೆ ನೀರು ತಮ್ಮ ಆರೋಗ್ಯಕ್ಕೆ ಹಾನಿ ಮಾಡಿದ್ದನ್ನು, ಕಲ್ಲಿದ್ದಲಿನ ನೀರು ಭತ್ತದ ಗದ್ದೆಗಳನ್ನು ಹಾಳು ಮಾಡಿದ್ದನ್ನು, ನಂದಿಕೂರಿನ ಜನ ಜೀವನೋಪಾಯಕ್ಕಾಗಿ ಆಶ್ರಯಿಸಿದ್ದ ಮಲ್ಲಿಗೆ ಕೃಷಿಗೆ ಕುತ್ತು ಬಂದಿದ್ದನ್ನು ವಿವರಿ ಸುವಾಗ ಅವರ ಗಂಟಲು ಕಟ್ಟಿಬಂದಿತ್ತು.ಪಡುಬಿದ್ರಿಯ ಶ್ರೀನಿವಾಸ್ ರಾವ್, ಮೋದಿಯ ಮುಖ ನೋಡಿಯೇ ತಾವು ಮತ ಹಾಕುವುದು ಅಂದರು.

ಅಲ್ಲಿನ ಮಸೀದಿ ಸಮೀಪ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಬಜಾಜ್ ಸರ್ವೀಸ್ ಸೆಂಟರ್ ಮಾಲೀ ಕರೂ ಆಗಿರುವ ಜಯ ಶೆಟ್ಟಿ, ‘ಮೋದಿ ಗಿಂತ ರಾಹುಲ್ ಒಳ್ಳೆಯ ನಾಯಕರ ಲ್ಲವೇ’ ಎಂದು ಮರುಪ್ರಶ್ನೆ ಹಾಕಿದರು.

‘ನಾನು ಸಹ ಹಿಂದುವೇ. ಬಿಜೆಪಿ ಅಧಿಕಾರಕ್ಕೆ ಬಂದಾಗ ಏನ್ ಮಾಡಿದ್ರು? ದತ್ತಪೀಠದ ವಿಚಾರ ಹಾಗೇ ಬಿಟ್ರು. ಸದಾನಂದ ಗೌಡರು ಎಂಪಿ ಆದಾಗ ಇಲ್ಲಿ ಕಾಣಲಿಕ್ಕೆ ಇರಲಿಲ್ಲ. ಹೆಗ್ಡೆ ಅವ್ರು ಪ್ರತಿ ಪಂಚಾಯ್ತಿಗೆ ಒಂದೆರೆಡು ಸಲ ಬಂದ್ ಹೋಗಿದಾರೆ’ ಎಂದು ಹಾಲಿ ಸಂಸದ ಜಯಪ್ರಕಾಶ ಹೆಗ್ಡೆ ಅವರ ಗುಣಗಾನ ಮಾಡಿದರು.ಕುಂದಾಪುರದ ಆರ್. ಎನ್. ಶೆಟ್ಟಿ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಶೆಟ್ಟಿ ಅವರಿಗೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿದ್ದವು. 

‘ಶೋಭಾ ಕರಂದ್ಲಾಜೆ ಉತ್ತಮ ಅಭ್ಯರ್ಥಿಯೇ. ಆದರೆ, ಬಿಜೆಪಿಯಲ್ಲಿ ಒಳಜಗಳ ಇದೆ. ಶಾಸಕರು, ಕಾರ್ಯ ಕರ್ತರನ್ನು ಪಕ್ಷದ ನಾಯಕರು ಸರಿ ಯಾಗಿ ನಡೆಸಿಕೊಳ್ಳುವುದಿಲ್ಲ. ಶೋಭಾ ಕ್ಷೇತ್ರಕ್ಕೆ ಹೊರಗಿನವರು ಎಂಬ ಭಾವನೆ ಸಹ ಇಲ್ಲಿದೆ’ ಅಂದರು.ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯಲ್ಲಿ ಇಡೀ ಕುಂದಾಪುರ ಎರಡು ಭಾಗವಾಗಿಬಿಡುತ್ತಿತ್ತು. ಈಗ ಶಾಸ್ತ್ರಿ ಸರ್ಕಲ್‌ನಲ್ಲಿ ಫ್ಲೈಓವರ್ ನಿರ್ಮಿ ಸಲು ಯೋಜನೆ ರೂಪಿಸಲಾಗಿದೆ.

ದೆಹ ಲಿಯವರೆಗೆ ಹೋಗಿ ಹೆಗ್ಡೆ ಆ ಕೆಲಸ ಮಾಡಿಸಿಕೊಂಡು ಬಂದರು. ಕೊಂಕಣ ರೈಲ್ವೆಯ ನಿಲ್ದಾಣ ಅಭಿವೃದ್ಧಿ ಕೆಲಸವೂ ಅವರ ಒತ್ತಡದಿಂದಲೇ ಆಗಿದೆ’ ಎಂದರು ಶೆಟ್ಟಿ.

‘ಯುಪಿಎ ಮೇಲಿನ ಆರೋಪ ಇಲ್ಲಿನ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ೧೦ ವರ್ಷ ಆಗಿದ್ದಕ್ಕೆ ಜನ ಬದಲಾವಣೆ ಬಯಸಿರಬಹುದು. ಆದರೆ, ಇಲ್ಲಿ ಹೆಗ್ಡೆ ಅವರೇ ಗೆಲ್ಲುವುದು’ ಎಂಬ ವಿಶ್ವಾಸ ಅವರ ಮಾತಿನಲ್ಲಿತ್ತು.ಕಾರ್ಕಳದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ನವೀನ್ ಬಪ್ಪಳಿಗೆ, ‘ಯುಪಿಎ ಸರ್ಕಾರ ಯುವಕರಿಗೆ ಸ್ಪಂದಿ ಸಿಲ್ಲ. ಉತ್ತಮ ಕಾಯ್ದೆಗಳನ್ನು ರೂಪಿಸಿರ ಬಹುದು. ಆದರೆ, ಅದರ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ’ ಎಂದರು. ‘ಒಮ್ಮೆ ಮೋದಿಗೆ ಅಧಿಕಾರ ಕೊಟ್ಟು ನೋಡಬೇಕು’ ಎಂದು ಸೇರಿಸಲೂ ಮರೆಯಲಿಲ್ಲ.

ಚಿಕ್ಕಮಗಳೂರಿನಿಂದ ಘಟ್ಟ ಇಳಿದು ಬರುವಾಗ ಸಿಕ್ಕಿದ ಪೆರ್ಡೂರಿನಲ್ಲಿ ‘ಸಿ.ಟಿ. ರವಿ ಅವರೇ ಬಿಜೆಪಿ ಅಭ್ಯರ್ಥಿಯಾಗ ಬೇಕಿತ್ತು’ ಎಂಬ ಅಭಿಪ್ರಾಯವಿತ್ತು.

‘ನಿಮಗೇನಾದರೂ ಸಮಸ್ಯೆ ಇದೆಯೇ’ ಅಂದರೆ, ‘ಇಲ್ಲಿ ಬಸ್‌ಸ್ಟ್ಯಾಂಡ್ ಆಗಿಲ್ಲ’ ಎಂಬ ಉತ್ತರ. ತಮಗೆ ಪ್ರತ್ಯೇಕ ತಾಲ್ಲೂಕು ಬೇಕು, ತಮ್ಮ ಊರು ತಾಲ್ಲೂಕು ಕೇಂದ್ರ­ವಾಗಬೇಕು ಎಂಬ ಬೇಡಿಕೆ ಹೆಬ್ರಿಯಲ್ಲಿತ್ತು. ಘಟ್ಟದ ಮೇಲಿನ ಚಿಕ್ಕಮಗಳೂರು, ಕರಾವಳಿಯ ಉಡುಪಿ ಜಿಲ್ಲೆಯನ್ನು ಸುತ್ತುಹಾಕಿದಾಗ ಕೇಳಿಬಂದ ದನಿಗಳು ಚುನಾವಣೆ ಲೋಕಸಭೆಯದ್ದೇ ಆದರೂ, ಫಲಿತಾಂಶದ ಮೇಲೆ ಪರಿ ಣಾಮ ಬೀರುವುದು ಸ್ಥಳೀಯ ಅಂಶಗಳೇ ಎಂಬುದನ್ನು ಸಾಬೀತು ಮಾಡುವಂತಿ ದ್ದವು.

ಬಿಜೆಪಿ, ಕಾಂಗ್ರೆಸ್ ಕಾರ್ಯ ಕರ್ತರು ಜಾತಿ ಲೆಕ್ಕಾಚಾರ ಮುಂದಿಟ್ಟು ತಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದರು.  ಮೋದಿ ಮೋಡಿಗೆ ಸಿಲುಕಿದವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು ಎಂಬುದೂ ಸ್ಪಷ್ಟವಾಗಿತ್ತು.
ಬಾಳೆಹೊ ನ್ನೂರಿನಲ್ಲಿ ಸಿಕ್ಕಿದ್ದ ‘ನಮೋ ಬ್ರಿಗೇಡ್’ ಮುಖ್ಯಸ್ಥ ದೀಪಕ್ ಭಟ್, ಫೇಸ್‌ಬುಕ್‌ ನಲ್ಲಿ ಮೋದಿ ಪರ ಪ್ರಚಾರ ಮಾಡುತ್ತಿರುವುದನ್ನು, ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ್ದನ್ನು ಖುಷಿಯಿಂದ ಬಣ್ಣಿಸಿದ್ದರು.
ಕೆಲ ಕಾಂಗ್ರೆಸ್ ನಾಯಕರ ಮಕ್ಕಳು ಕೂಡ ಈ ಪ್ರಚಾರದಲ್ಲಿ ಕೈಜೋಡಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

‘ಮೋದಿ ಅಲೆ ಇದೆ ನಿಜ. ಆದರೆ, ಯಶಸ್ಸು ಸಿಗ್ತದೆ ಅಂತ ಹೇಳಲಿಕ್ಕೆ ಆಗದು. ಗಾಳಿಯಲ್ಲಿ ಬೀಸಿದ ಕಲ್ಲು ಎಲ್ಲಾದರೂ ಬಿದ್ದೀತು’ ಎಂದು ಕುಂದಾ ಪುರದ ಉದ್ಯಮಿ ಕೆ. ಚಂದ್ರಶೇಖರ್ ಹೇಳಿದ ಮಾತು ಈ ಎಲ್ಲ ಅಭಿಪ್ರಾಯ ಗಳನ್ನೂ ಗುಡಿಸಿ ಹಾಕುವಂತಿತ್ತು.

ಕಾಂಗ್ರೆಸ್‌ನ ‘ಆಪ್’ ಅಭ್ಯರ್ಥಿ
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನ ಆಮ್ ಆದ್ಮಿ ಅಭ್ಯರ್ಥಿ. ಅವರ ಪ್ರಾಮಾ­ಣಿ ಕತೆ, ಬದ್ಧತೆ ಬಗ್ಗೆ ಜನರಲ್ಲಿ ಪ್ರೀತಿ ಇದೆ. ಆದರೆ, ಅವರ ವೈಯಕ್ತಿಕ ವರ್ಚಸ್ಸಿಗೆ ಪೂರಕ­ವಾಗಿ ಇತರ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿಲ್ಲ. ಲೋಕಸಭೆ ಉಪಚುನಾವಣೆ ಗೆಲುವು, ವಿಧಾನಸಭೆ ಚುನಾವಣೆಯ ಜಯ ಕಾಂಗ್ರೆಸ್ ಪಕ್ಷದಲ್ಲಿ ಹುಮ್ಮಸ್ಸು ತುಂಬಿತ್ತು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಸೋಮಾರಿತನವನ್ನು ಅಪ್ಪಿಕೊಂಡಿದೆ. ಬೇರುಮಟ್ಟದಲ್ಲಿ ಕಾರ್ಯ­ಕರ್ತರನ್ನು ಸಂಘಟಿಸುವ ಕೆಲಸ ಆಗಿಲ್ಲ. ಮೋದಿ ಅಲೆಯನ್ನು ಎದುರಿಸುವ ಅಬ್ಬರದ ಪ್ರಚಾರವೂ ಇಲ್ಲ.

ಅತ್ತ ಬಿಜೆಪಿಯಲ್ಲಿ ಮೋದಿ ಅಲೆ ಸೃಷ್ಟಿಸಲು ಕೋಟ್ಯಂತರ ರೂಪಾಯಿ ಹಣ ಹರಿದುಬಂದಿದೆ. ಆ ಹಣದ ಮೂಲ ಯಾರಿಗೂ ಗೊತ್ತಿಲ್ಲ. ೨-೩ ತಿಂಗಳಿನಿಂದಲೇ ಪಕ್ಷ ಚುನಾವಣೆಯ ತಯಾರಿ ನಡೆಸಿದೆ. ಇಲ್ಲಿ ಶೋಭಾ ಅಭ್ಯರ್ಥಿಯಾಗಿರುವುದು ಮುಖ್ಯವಾಗಿಲ್ಲ. ಮೋದಿ ಪ್ರಭಾವ ಎಲ್ಲ ಜಾತಿ, ವರ್ಗಗಳನ್ನು ಪ್ರಭಾವಿಸುವಂತೆ ಬಿಜೆಪಿ ಬೇರುಮಟ್ಟದಲ್ಲಿ ಕೆಲಸ ಮಾಡಿದೆ.
ಉಡುಪಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಶಾಸಕರು ದನಿ ಎತ್ತುತ್ತಿಲ್ಲ. ಹಾಗಾಗಿ ಈ ಬಾರಿ ಮುಸ್ಲಿಮರೆಲ್ಲ ‘ನೋಟಾ’ (ಅಭ್ಯರ್ಥಿಗಳಲ್ಲಿ ಯಾರೂ ಬೇಡ)  ಗುಂಡಿ ಒತ್ತಲು ನಿರ್ಧರಿಸಿದ್ದಾರೆ.
 -ಕೆ. ಫಣಿರಾಜ್,  ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.