ಚಿಕ್ಕಮಗಳೂರು – ಉಡುಪಿ: ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡಿನ ವಿಭಿನ್ನ ಭೌಗೋಳಿಕ ಪ್ರದೇಶ ಒಳಗೊಂಡಿರುವ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.
ಮೋದಿ ಅಲೆಯಲ್ಲಿ ಗೆಲುವಿನ ದಡ ಸೇರಲು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹರಸಾಹಸ ಮಾಡುತ್ತಿದ್ದರೆ, ವೈಯಕ್ತಿಕ ವರ್ಚಸ್ಸಿನ ಅಲೆಯನ್ನು ಖುದ್ದು ಸೃಷ್ಟಿಸಿರುವ ಕಾಂಗ್ರೆಸ್‌ನ ಹಾಲಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮತ್ತೆ ವಿಜಯ ಪತಾಕೆ ಹಾರಿಸುವ ಉತ್ಸಾಹದಲ್ಲಿದ್ದಾರೆ.
ಕೇಂದ್ರದಲ್ಲಿ ತೃತೀಯ ರಂಗ ದೇಶದ ಚುಕ್ಕಾಣಿ ಹಿಡಿಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿ ವಿ.ಧನಂಜಯ ಕುಮಾರ್ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.
ಬಿಎಸ್‌ಪಿಯ ಜಾಕೀರ್ ಹುಸೇನ್, ಸಿಪಿಐನ ಎಸ್.ವಿಜಯ ಕುಮಾರ್, ಸಿಪಿಐ(ಎಂಎಲ್)ನ ಸಿ.ಜೆ.ಜಗನ್ನಾಥ್, ಆಮ್ ಆದ್ಮಿ ಪಕ್ಷದ ಎಸ್.ಎಚ್.ಗುರುದೇವ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಎಂ.ಡಿ.ಮೊಯಿದ್ದೀನ್ ಖಾನ್, ಜಿ. ಮಂಜುನಾಥ್, ಶ್ರೀನಿವಾಸ, ಸುಧೀರ್ ಕಾಂಚನ್ ಕಣದಲ್ಲಿದ್ದಾರೆ. ಈ ಪೈಕಿ, ಸಿಪಿಐ ಅಭ್ಯರ್ಥಿ ಮಾತ್ರ ಹೋರಾಟದ ಕೆಚ್ಚು ಪ್ರದರ್ಶಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
‘ಜಯಪ್ರಕಾಶ್ ಹೆಗ್ಡೆ ಸರಳ, ಸಜ್ಜನ. ಯಾರೇ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಾರೆ. ಅಲ್ಪ ಅವಧಿಯಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ’ ಎಂಬ ಅಭಿಪ್ರಾಯ ಚಿಕ್ಕಮಗಳೂರು ಭಾಗದ ಮತದಾರಲ್ಲಿದೆ.
‘ಹೆಗ್ಡೆ ಅಡ್ಡಿ ಇಲ್ಲ ಮಾರಾಯ್ರೆ, ಆದರೆ, ಏನು ಮಾಡೋದು ಈ ಬಾರಿ ನಮಗೆ ಮೋದಿ ಬೇಕಲ್ಲಾ, ಅದಕ್ಕೆ ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡುವಾ’ ಎಂಬುದು ಕರಾವಳಿ ಜನರ ಅಂಬೋಣ.
ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು ಈ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ. ಅವರ ಈ ನಿಲುವು ತಮಗೆ ಲಾಭವಾಗಲಿದೆಯೆಂದು ಕಾಂಗ್ರೆಸಿಗರು ವ್ಯಾಖ್ಯಾನಿಸುತ್ತಾರೆ. ‘ಹಾಲಾಡಿಯವರ ಬೆಂಬಲಿಗರೆಲ್ಲರೂ ನಮ್ಮೊಂದಿಗೆ ಗುರುತಿಸಿ ಕೊಂಡಿರುವುದರಿಂದ ಕುಂದಾಪುರದಲ್ಲಿ ಈ ಬಾರಿ ಮುನ್ನಡೆ ಸಿಗಲಿದೆ’ ಎನ್ನುವ ವಿಶ್ವಾಸ ಬಿಜೆಪಿ ನಾಯಕರದ್ದು.
ಉಡುಪಿ ಮತ್ತು ಕಾಪು ಕ್ಷೇತ್ರದ ಜನರಲ್ಲಿ ‘ಕೇಂದ್ರದಲ್ಲಿ ಮೋದಿ ಬರಲಿ; ಆದರೆ, ಇಲ್ಲಿ ಮಾತ್ರ ನಮಗೆ ಹೆಗ್ಡೆಯೇ ಇರಲಿ’ ಎಂಬ ಭಾವನೆ ಇದೆ.
ಸಂಘ ಪರಿವಾರದ ಪ್ರಭಾವ ಹೆಚ್ಚು ಕಾಣಿಸುವ ಐಕಾರ್ಕಳದಲ್ಲಿ ಮಹಿಳೆಯರು, ಯುವಜನರನ್ನು ಮಾತನಾಡಿಸಿದರೆ ‘ನಮಗೆ ಶೋಭಾ ಮುಖ್ಯವಲ್ಲ, ಮೋದಿಯೇ ಬರಬೇಕಲ್ಲಾ’ ಎನ್ನುತ್ತಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ತಂದುಕೊಟ್ಟಿದ್ದ ತರೀಕೆರೆಯಲ್ಲಿ ಪರಿಸ್ಥಿತಿ ಕೊಂಚ ಬದಲಾಗಿದೆ. ಶಾಸಕ ಶ್ರೀನಿವಾಸ್ ಅವರ ಬೆಂಬಲಿಗರದೇ ಒಂದು ಗುಂಪು ಮತ್ತು ಕಾಂಗ್ರೆಸಿನ ಹಿರಿಯ ನಾಯಕರದೇ ಪ್ರತ್ಯೇಕ ಗುಂಪು ರೂಪುಗೊಂಡಿದೆ. ಈ ಬೆಳವಣಿಗೆ ಅಲ್ಲಿ ಅಭ್ಯರ್ಥಿಗೆ ತೊಡಕಾಗುವ ಆತಂಕ ಕಾಂಗ್ರೆಸ್ ನಾಯಕರಿಗೂ ಇದ್ದಂತಿದೆ.
ಬಿಜೆಪಿ ತೊರೆದು ಕೆಜೆಪಿ ಸೇರಿದ್ದ ತರೀಕೆರೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಬಿಜೆಪಿಗೆ ಮರಳಿರುವುದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಬಿಜೆಪಿ ಸೇರಿರುವುದು ಅನುಕೂಲಕರವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದ ಶೋಭಾ ಅವರು ಟಿಕೆಟ್ ಕೈತಪ್ಪಿದ ಮೇಲೆ ಅನಿವಾರ್ಯವಾಗಿ ಈ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದಾರೆ. ಇಲ್ಲಿ ತಮ್ಮ ಸ್ಪರ್ಧೆಗೆ ಒಳಗೊಳಗೆ ಅಥವಾ ಬಹಿರಂಗವಾಗಿ ವಿರೋಧಿಸಿದ್ದ ನಾಯಕರನ್ನು ಈಗ ಅವರು ಪೂರ್ಣವಾಗಿ ನಂಬುವ ಸ್ಥಿತಿಯಲ್ಲಿಲ್ಲ. ಗೆಲುವು ದಕ್ಕಿಸಿಕೊಳ್ಳಲು ಸ್ಥಳೀಯ ನಾಯಕರಿಗಿಂತ ಹೆಚ್ಚಾಗಿ ‘ಮೋದಿ ಅಲೆ’ ನೆಚ್ಚಿಕೊಂಡಂತಿದೆ.
‘ಶೋಭಾ ಸೋಲಿಸಲು ನಾವೇನೂ ಕಷ್ಟಪಡುವ ಅಗತ್ಯವಿಲ್ಲ, ಸಿ.ಟಿ.ರವಿ ಮತ್ತು ವಿ. ಸುನಿಲ್ ಕುಮಾರ್ ಇಬ್ಬರೇ ಸಾಕು’ ಎನ್ನುವ ಶೋಭಾ ಎದುರಾಳಿಗಳ ಮಾತು ದಿಟವೇ ಆಗಿದ್ದರೆ, ಅದೇ ಬಿಜೆಪಿಗೆ ದೊಡ್ಡ ತೊಡಕಾಗಲಿದೆ.
ಇದೆಲ್ಲದರ ಅರಿವಿರುವ ಶೋಭಾ, ಕ್ಷೇತ್ರದ ಜನರಲ್ಲಿ ತಮಗೆ ಮತ ನೀಡುವಂತೆ ಕೇಳುವ ಬದಲು ‘ಮೋದಿಗೆ ಮತ ನೀಡಿ’ ಎಂದು ಕೇಳುತ್ತಾ ಮೋದಿ ಅಲೆಯನ್ನು ಪ್ರಯೋಗಿಸಿ ಮತ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷ ಬದಲಾವಣೆಯ ಜತೆಗೆ ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡಿದ್ದಾರೆ ಎನ್ನುವ ಅಪವಾದ, ಶೋಭಾ ಕ್ಷೇತ್ರಕ್ಕೆ ಹೊಸಬರು ಎನ್ನುವ ಅಭಿಪ್ರಾಯ ಜನರಲ್ಲಿದೆ.
‘ನನಗೆ ಸಿಕ್ಕ ಅವಧಿ ಒಂದು ವರ್ಷ ಹತ್ತು ತಿಂಗಳು ಮಾತ್ರ. ಈ ಅಲ್ಪ ಅವಧಿಯಲ್ಲೇ ಕೇಂದ್ರದಿಂದ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರ ಸಂಪರ್ಕ ಸಾಧಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಕಟ್ಟಿರುವ ಕನಸುಗಳನ್ನು ನನಸಾಗಿಸಲು ಮತ್ತೆ ಆಶೀರ್ವದಿಸಿ’ ಎಂದು ಹೆಗ್ಡೆ ಮತದಾರರ ಬಳಿ ಹೋಗುತ್ತಿದ್ದಾರೆ.
ರಾಜ್ಯ ಸರ್ಕಾರದ ಜನಪ್ರಿಯ ಅನ್ನಭಾಗ್ಯ, ಬಿದಾಯಿ ಯೋಜನೆಯಿಂದ ಲಾಭ ಆಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ಗೆ ಬರಲಿವೆ ಎನ್ನುವ ನಿರೀಕ್ಷೆ ಅವರದ್ದು.
ಕಳಸ ಇನಾಂ ಭೂಮಿ, ಒತ್ತುವರಿ ತೆರವು, ಅಡಿಕೆ ಸಮಸ್ಯೆ, ಕಸ್ತೂರಿ ರಂಗನ್ ವರದಿ ಹಾಗೂ ಕೇಂದ್ರದ ಯುಪಿಎ ಸರ್ಕಾರದ ಹಗರಣಗಳನ್ನು ಕಾಂಗ್ರೆಸ್ ವಿರುದ್ಧದ ಅಸ್ತ್ರಗಳಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರಯೋಗಿಸುತ್ತಿವೆ. ಕಾಂಗ್ರೆಸ್‌ಗೆ ಇವೇ ಮುಳುವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಒತ್ತುವರಿ ಸಂತ್ರಸ್ತರ ಆಕ್ರೋಶ ತಣಿಸಲು, ಅಡಿಕೆ ಬೆಳೆಗಾರರನ್ನು ಸಂತೈಸಲು ಹಾಗೂ ತರೀಕೆರೆಯಲ್ಲಿ ಪಕ್ಷಕ್ಕೆ ಆಗಿರುವ ಪ್ರತಿಕೂಲ ಬೆಳವಣಿಗೆ ಸರಿದೂಗಿಸುವ ಉದ್ದೇಶದಿಂದಲೇ ಕಾಂಗ್ರೆಸ್ ಈ ಎರಡೂ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಬೃಹತ್ ಸಮಾವೇಶ ಏರ್ಪಡಿಸಿ, ಪ್ರಚಾರ ನಡೆಸಿದೆ.
ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದ್ದ ಸನ್ನಿವೇಶವೇ ಬೇರೆ. ಅಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲಿದ್ದ ಭ್ರಷ್ಟಾಚಾರದ ಆಪಾದನೆಗಳು, ಆ ಪಕ್ಷದ ಕೆಲ ನಾಯಕರ ಜೈಲುವಾಸ, ಶಾಸಕರು ಮತ್ತು ಸಚಿವರ ಲೈಂಗಿಕ ಹಗರಣ ಜನರ ಆಕ್ರೋಶಕ್ಕೆ ಕಾರಣವಾಗಿ ಬಿಜೆಪಿ ವಿರೋಧಿ ಅಲೆ ಎದ್ದಿತ್ತು.
ಆದರೆ ಈಗ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಕಾಂಗ್ರೆಸ್ ವಿರೋಧಿ ಅಲೆ ಇಲ್ಲದಿದ್ದರೂ, ಒಂದಷ್ಟು ಮೋದಿ ಅಲೆ ಎದ್ದಿರುವುದು ಗೋಚರಿಸುತ್ತದೆ.
ಕಳೆದ ಉಪಚುನಾವಣೆಯಲ್ಲಿ ಎಸ್.ಎಲ್.ಬೊಜೇಗೌಡರನ್ನು ಕಣಕ್ಕಿಳಿಸಿ ಕೇವಲ 72,080 ಮತಗಳಿಗೆ ತೃಪ್ತಿಪಟ್ಟಿದ್ದ ಜೆಡಿಎಸ್, ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ, ಒಂದು ಬಾರಿ ಕೇಂದ್ರ ಸಚಿವರಾಗಿದ್ದ ವಿ.ಧನಂಜಯ ಕುಮಾರ್ ಅವರನ್ನು ಕಣಕ್ಕಿಳಿಸುವ ಮೂಲಕ ‘ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ’ ಎನ್ನುವ ಸಂದೇಶ ರವಾನಿಸಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರ ಮಾತ್ರ ಜೆಡಿಎಸ್ ತೆಕ್ಕೆಯಲ್ಲಿದ್ದು ಉಳಿದಂತೆ ಎಲ್ಲಿಯೂ ಆ ಪಕ್ಷದ ಪ್ರಭಾವ ಇದ್ದಂತೆ ಕಾಣಿಸುತ್ತಿಲ್ಲ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಹೊಂದಿರುವ ಸಿಪಿಐ ಕಾರ್ಮಿಕರು, ಶ್ರಮಿಕ ವರ್ಗದ ಮತಗಳ ಮೇಲೆ ಕಣ್ಣಿಟ್ಟಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಹೋರಾಟದ ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿ ಲೆಕ್ಕಾಚಾರ ತಲೆಕೆಳಗಾಗಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.