ADVERTISEMENT

ವಿಜಯನಗರ ಕಾಲದ ಶಾಸನ ಪತ್ತೆ

ಕೃಷ್ಣದೇವರಾಯ ಆಡಳಿತದಲ್ಲಿ ಭೂಮಿದಾನ ನೀಡಿದ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 5:13 IST
Last Updated 2 ಜುಲೈ 2015, 5:13 IST

ಉಡುಪಿ: ಕುಂದಾಪುರ ತಾಲ್ಲೂಕಿನ ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವ­ರಾಯನ ಕಾಲದ ಶಾಸನ ಪತ್ತೆಯಾಗಿದೆ ಎಂದು ಶಿರ್ವದ ಮೂಲ್ಕಿ ಸುಂದರ್‌­ರಾಮ್‌ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.

ಕೃಷ್ಣದೇವರಾಯನ ಆಡಳಿತದ ಪ್ರಥಮ ವರ್ಷ ಅಂದರೆ ಕ್ರಿ.ಶ. 1509ರಲ್ಲಿ ಶಾಸನ ಕೆತ್ತಲಾಗಿದೆ.  ಶಾಸನವನ್ನು ಆಯತಾಕಾರದ ಕಲ್ಲಿನ ಮೇಲೆ ಬರೆಯಲಾಗಿದ್ದು, ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಶಾಸನದ ಪ್ರತಿ ಸಾಲನ್ನು ಸೊನ್ನೆಯಿಂದ ಆರಂಭಿಸ­ಲಾಗಿದೆ. ಶಾಸನ­­ಗಳು ದೇವತಾ ಶ್ಲೋಕದೊಂದಿಗೆ ಆರಂಭವಾಗುವುದು ಸಾಮಾನ್ಯ. ಆದರೆ ಈ ಶಾಸನವು ಸ್ವಸ್ತಿಶ್ರೀ ಪದದೊಂದಿಗೆ ಆರಂಭವಾಗಿದೆ. ಶಾಸನ­ದಲ್ಲಿ ಒಟ್ಟು 30 ಸಾಲುಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಕೃಷ್ಣದೇವರಾಯನ ಕಾಲದಲ್ಲಿ ಬಾರ್ಕೂರು ರಾಜ್ಯವನ್ನು ಮಲ್ಲಪ್ಪ ಒಡೆಯರು ಆಳ್ವಿಕೆ ನಡೆಸುತ್ತಿದ್ದರೆಂದು ಶಾಸನ ತಿಳಿಸುತ್ತದೆ. ಕೃಷ್ಣದೇವರಾಯನ ಆಡಳಿತದ ಪ್ರಥಮ ವರ್ಷ ರಾಜಕೀಯ ದಂಗೆಗಳು ನಡೆಯುತ್ತಿದ್ದ ಕಾರಣ ಪರಿಸ್ಥಿತಿ ಶಾಂತಿಯುತವಾಗಿರಲಿಲ್ಲ. ಆದ್ದರಿಂದ ಶತ್ರುಗಳು ನಾಶವಾಗಿ ಮಿತ್ರರ ಸಂಖ್ಯೆ ವೃದ್ಧಿಸಿ ಆರೋಗ್ಯ, ಐಶ್ವರ್ಯ ಹೆಚ್ಚಲಿ ಎಂದು ದೇವಸ್ಥಾನಕ್ಕೆ ಭೂಮಿ ದಾನ ನೀಡಿದ ಉಲ್ಲೇಖ ಇದರಲ್ಲಿದೆ. ಶಾಸನದ ಕೊನೆಯಲ್ಲಿ ಗಣಪತಿ ಮತ್ತು ಶಿವನ ಸ್ತುತಿ ಇದೆ ಎಂದು ಹೇಳಿದ್ದಾರೆ.

ಈ ಶಾಸನ ದೇವಸ್ಥಾನದ ಗರ್ಭ­ಗುಡಿ­ಯಲ್ಲಿತ್ತು. ಆದ್ದರಿಂದ ಈ ವರೆಗೆ ಬೆಳಕಿಗೆ ಬಂದಿರಲಿಲ್ಲ. ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಶಾಸನ ಪತ್ತೆಯಾಗಿದೆ. ಶಾಸನ ಅಧ್ಯಯನಕ್ಕೆ ದೇವಸ್ಥಾನದ ಆಡಳಿತ ಮೋಕ್ತೇಸರ ಸುಬ್ರಾಯ ಉಡುಪ, ಕಂದಾವರದ ಡಾ. ಬಿ. ವೆಂಕಟರಮಣ ಉಡುಪ ಹಾಗೂ ಮಾಧವ ಅಡಿಗ ಅವರು ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.