ADVERTISEMENT

ಸ್ವಾಭಿಮಾನಿ ಖಾದರ್

ಸಂತೋಷ್ ತಿಮ್ಮಟ್ಟು
Published 18 ಮಾರ್ಚ್ 2013, 9:50 IST
Last Updated 18 ಮಾರ್ಚ್ 2013, 9:50 IST

ಬಂದವಳು ನೀರಿಗೆ ಬಾರದಿರುವಳೇ?' ಎಂಬುದು ಹಳೇ ಗಾದೆ. ಎಲೆಕ್ಟ್ರಾನಿಕ್ಸ್ ವಸ್ತು ಕೊಂಡವರು ರಿಪೇರಿಗೆ ತರಲೇಬೇಕು ಎಂಬುದು ಹೊಸ ಗಾದೆ!

ಬದುಕಿನ ಬಗೆಗಿನ ಪ್ರೀತಿ, ಛಲವೊಂದಿದ್ದರೆ ಅಂಗವಿಕಲರೂ ಸಕಲವನ್ನೂ ಬಾಗಿಸಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ ಅಬ್ದುಲ್ ಖಾದರ್. ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಪದವಿನ ನಿವಾಸಿಯಾದ ಖಾದರ್ ಹುಟ್ಟು ಅಂಗವಿಕಲರು. ಆದರೆ ವಿಕಲತೆಯ ನೆಪವನ್ನಿಟ್ಟುಕೊಂಡು ಅವರು ಎಂದೂ ಇತರರ ಮುಂದೆ ಕೈಯೊಡ್ಡಿದವರಲ್ಲ. ಯಾರೊಂದಿಗೂ ಕೆಲಸಕ್ಕಾಗಿ ಬೇಡಿಕೆ ಇಟ್ಟವರಲ್ಲ.

ಅವರು ಸ್ವಂತ ಉದ್ಯಮದಲ್ಲೇ ಆರಾಮದಾಯಕವಾದ ಸಂತೋಷದ ಬದುಕು ಕಟ್ಟಿಕೊಂಡಿದ್ದಾರೆ. ದಿನದ ಯಾವ ಹೊತ್ತೂ ಅವರ ಅಂಗಡಿಯೂ ಆಗಿರುವ ಮನೆಗೆ ಹೋದರೆ ಕೆಟ್ಟು ನಿಂತ  ಪಂಪ್, ಕೆಲಸವನ್ನೇ ಮಾಡದ ಮಿಕ್ಸಿ, ಗ್ರೈಂಡರ್, ಇನ್ಯಾವುದೋ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಚ್ಚಿಟ್ಟು, ಇನ್ನಾವುದನ್ನೋ ಜೋಡಿಸುತ್ತಾ, ಮತ್ತಾವುದನ್ನೋ ಸುತ್ತುತ್ತಾ...  ಮಾಡಬೇಕಾದ ಕೆಲಸವನ್ನು ಹೇಳಿದ ದಿನಕ್ಕೆ ಮುಗಿಸಿ ತಣ್ಣಗೆ ಗ್ರಾಹಕರ ಕೈಗಿಡುವ ಅವರ ಪ್ರಾಮಾಣಿಕತೆ ಮೆಚ್ಚುವಂತದ್ದು. ಮನೆಯಲ್ಲಿ ಒಬ್ಬರೇ ಇರುವ ಖಾದರ್ ಗ್ರಾಹಕರಿಂದ ದೊಡ್ಡ ಮೊತ್ತದ ದುಡ್ಡನ್ನು  ನಿರೀಕ್ಷಿಸಿದವರಲ್ಲ. ನೀವು ಬಡ ಗ್ರಾಹಕರೋ ಕೊಟ್ಟಷ್ಟು ಸಾಕು ಎಂದುಕೊಂಡು ಸಣ್ಣ ನಗು ಬೀರುತ್ತಾರೆ ಖಾದರ್.

ಚಿಕ್ಕಂದಿನಿಂದಲೇ ಎಲೆಕ್ಟ್ರಾನಿಕ್ಸ್ ವಸ್ತುಗಳ ಬಗ್ಗೆ ವಿಶೇಷ ಕುತೂಹಲ ಇಟ್ಟುಕೊಂಡಿರುವ ಅವರು ರಿಪೇರಿ ಕೆಲಸವನ್ನು ಯಾರ ಬಳಿಯೂ ಕೆಲಸ ಮಾಡಿ, ಕೋರ್ಸ್ ತೆಗೆದುಕೊಂಡು ಕಲಿತವರಲ್ಲ. ಇನ್ನೊಬ್ಬರು ಕೆಲಸ ಮಾಡುತ್ತಿರುವುದನ್ನು ನೋಡಿ ಕಲಿತವರು. ಅರವತ್ತರ ಹರೆಯ ಖಾದರ್ ಎರಡು ವರ್ಷಗಳ ಹಿಂದೆ ಸುಂದರ ಮನೆಯೊಂದನ್ನು ಕಟ್ಟಿಸಿ ಅದರ ಅರ್ಧ ಭಾಗವನ್ನೇ ತಮ್ಮ ಅಂಗಡಿಯನ್ನಾಗಿ ಮಾಡಿಕೊಂಡಿದ್ದಾರೆ. ರೂಮು ತುಂಬಾ ಗಿರಾಕಿಗಳು ರಿಪೇರಿಗೆ ಇಟ್ಟು ಹೋದ ಎಲೆಕ್ಟ್ರಾನಿಕ್ಸ್ ವಸ್ತುಗಳ ಆಧಾರದ ಮೇಲೆಯೇ ಅವರ ಗ್ರಾಹಕ ಸೇವೆಯನ್ನು ಲೆಕ್ಕ ಹಾಕಬಹುದು.

ಸುಮಾರು ಮೂವತ್ತೈದು ವರ್ಷಗಳಿಂದ ನಿರಂತರವಾಗಿ ಗ್ರಾಹಕರ ವಸ್ತುಗಳನ್ನು ರಿಪೇರಿ  ಮಾಡುತ್ತ ಅಂಗಡಿಯೆದುರು ಹಾದು ಹೋಗುವ ಮಂದಿಯನ್ನು ಪ್ರೀತಿಯಿಂದ ಮಾತಾಡಿಸುವರು ಖಾದರ್. ತಮಗೆ ಬಂದ ದುಡ್ಡಿನಲ್ಲಿ ಅಲ್ಪಸ್ವಲ್ಪ ಬಡವರಿಗೆ ದಾನ ಮಾಡಿ ಮಾನವತೆ ಮೆರೆದಿದ್ದಾರೆ. ದೈಹಿಕ ಮಿತಿಗಳ ನಡುವೆಯೂ ಸ್ವಯಂ ಉದ್ಯೋಗ ನಡೆಸಿ ಗೌರವದ ಮಾದರಿ ಬದುಕನ್ನು ನಡೆಸುತ್ತಿರುವ ಖಾದರ್ ಅವರನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.