ADVERTISEMENT

ಹಿರಿಯಡಕ: ಮತದಾನದ ಹಕ್ಕಿಗಾಗಿ ದಂಪತಿ ಪ್ರತಿಭಟನೆ

ಅಧಿಕಾರಿಗಳ ನಿರ್ಲಕ್ಷ್ಯ– ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:08 IST
Last Updated 12 ಏಪ್ರಿಲ್ 2014, 5:08 IST

ಹಿರಿಯಡಕ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ­ಗೊಳಿಸಲು ಅರ್ಜಿ ಮತ್ತು ಎಲ್ಲಾ ದಾಖಲೆ­ಯನ್ನು ನೀಡಿದರೂ ಅಧಿಕಾರಿಗಳ ತಪ್ಪಿನಿಂದಾಗಿ ಹೆಸರು ಸೇರ್ಪಡೆಗೊಂಡಿಲ್ಲ. ಹಾಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಗೋಪಾಲ ಅಪ್ಪು ಕೋಟೆಯಾರ್ ದಂಪತಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಮಣಿಪಾಲ ಸಮೀಪದ ಹೆರ್ಗ ಗ್ರಾಮದ ಸರಳೇಬೆಟ್ಟು ನಿವಾಸಿಗಳಾದ ಗೋಪಾಲ ಅಪ್ಪು ಕೋಟೆಯಾರ್ ಮತ್ತು ಸುನಂದ ದಂಪತಿ ಕಳೆದ ಫೆ.6ರಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಬೇಕಾದ ಎಲ್ಲಾ ದಾಖಲೆ­ಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸಿ­ದ್ದರು. ಆದರೆ ಅಧಿಕಾರಿಗಳ ತಪ್ಪಿನಿಂದ ಈ ದಂಪತಿಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

ಹಾಗಾಗಿ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಕೈಗೊಂಡರು.
‘ಚುನಾವಣಾ ಆಯೋಗ ಚುನಾವಣೆಯ ಸಂದರ್ಭ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ನೀಡುತ್ತಿದೆ. ಚುನಾವಣಾ ಅಯೋಗದ ಕಾರ್ಯ ವೈಖರಿ ಸರಿಯಾಗಿಲ್ಲ. ಅಧಿಕಾರಿ­ಗಳ ತಪ್ಪಿನಿಂದಾಗಿ ನಮ್ಮ ಮತದಾನದ ಹಕ್ಕು ತಪ್ಪಿ ಹೋಗಿದೆ’ ಎಂದು  ಕೋಟೆಯಾರ್ ಹೇಳಿದರು.

‘ನಮ್ಮ ಅಧಿಕಾರಿಗಳ ತಪ್ಪಿನಿಂದಾಗಿ ಈ ಪ್ರಮಾದ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ನಿಮಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಯವಿಟ್ಟು ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಿ, ಈ ಪ್ರಮಾದಕ್ಕೆ ಸಂಬಂಧಪಟ್ಟಂತೆ ವಿಚಾರಣಾ ಆಯೋಗ­ವನ್ನು ರಚಿಸಲಾಗಿದೆ. ಇದಕ್ಕೆ ಸಂಬಂಧ­ಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿ­ಕಾರಿ ಹೇಳಿದ್ದಾರೆ. ಆದರೆ ಯಾರೋ ಮಾಡಿದ ತಪ್ಪಿನಿಂದ ನಾವು ನಮ್ಮ ಸಂವಿಧಾನದ ಹಕ್ಕಿನಿಂದ ವಂಚಿತರಾಗುವ ಪ್ರಸಂಗ ಬಂದಿದೆ.

ಇನ್ನು ಮುಂದೆ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು. ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಬೇಕು’ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮತದಾನ ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ತಪ್ಪದೇ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಒಂದೆಡೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆ­ಯುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ತಪ್ಪಿನಿಂ­ದಾಗಿ ಗೋಪಾಲ ಅಪ್ಪು ಕೋಟೆಯಾರ್ ಮತ್ತು ಸುನಂದ ದಂಪತಿ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.