ADVERTISEMENT

ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ!

​ಪ್ರಜಾವಾಣಿ ವಾರ್ತೆ
Published 28 ಮೇ 2013, 8:24 IST
Last Updated 28 ಮೇ 2013, 8:24 IST
ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಅವರು ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥನನ್ನು ಹಿಡಿದು ವಾಹನದಲ್ಲಿ ವಿಶ್ವಾಸದ ಮನೆಗೆ ಕರೆತರುತ್ತಿರುವುದು.
ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಅವರು ಹೆದ್ದಾರಿ ಬದಿಯ ಮಾನಸಿಕ ಅಸ್ವಸ್ಥನನ್ನು ಹಿಡಿದು ವಾಹನದಲ್ಲಿ ವಿಶ್ವಾಸದ ಮನೆಗೆ ಕರೆತರುತ್ತಿರುವುದು.   

ಶಿರ್ವ: ಮಾನಸಿಕವಾಗಿ ಅಸ್ವಸ್ಥರಾಗಿ ಮನೆಮಂದಿಯಿಂದ ದೂರವಾಗಿ ಬೀದಿಯಲ್ಲಿ  ಅಲೆದಾಡುತ್ತಿದ್ದ ಯುವಕನೊಬ್ಬನನ್ನು ಗುರುವಾರ ಶಂಕರಪುರದ ವಿಶ್ವಾಸದ ಮನೆಯ ಕಾರ್ಯಕರ್ತರು `ವಿಶ್ವಾಸದ ಮನೆ' ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಲೆದಾಡುತ್ತಿದ್ದ ಸುಮಾರು 35ರ ವಯಸ್ಸಿನ ಮಾನಸಿಕ ಅಸ್ವಸ್ಥನನ್ನು ಶಂಕರಪುರ ವಿಶ್ವಾಸದ ಮನೆಯ ಕಾರ್ಯಕರ್ತರು ಬಲು ಸಾಹಸಪಟ್ಟು ಹಿಡಿದು ಪುನರ್ವಸತಿ ಕಲ್ಪಿಸಿದ್ದಾರೆ. ಹೆಸರು ವಿಳಾಸ ತಿಳಿಯದ ಈ ಯುವಕ ಕನ್ನಡ ಹಿಂದಿ ಮಾತನಾಡುತ್ತಿದ್ದು, ಉತ್ತರ ಕನ್ನಡ ಮೂಲದವ ಎಂಬುದಷ್ಟೇ ತಿಳಿದುಬಂದಿದೆ. ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಉದ್ಯಾವರ ಸಮೀಪದ ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಸ್ನಾನವಿಲ್ಲದೆ ಕೊಳಕು ಬಟ್ಟೆಯೊಂದಿಗೆ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಸಂಸ್ಥೆಗೆ ಸೇರ್ಪಡೆಗೊಳಿಸಿದ್ದಾರೆ.

ವಿಶ್ವಾಸದ ಮನೆಯ ವಾಹನದಲ್ಲಿ ಅನಾಥಾಶ್ರಮಕ್ಕೆ ಕರೆತಂದ ಕಾರ್ಯಕರ್ತರು ಆತನನ್ನು ಶುಚಿಗೊಳಿಸಿ ಶುಭ್ರ ಬಟ್ಟೆ ತೊಡಿಸಿ ಆಹಾರ ನೀಡಿ ಮಾನಸಿಕ ಚಿಕಿತ್ಸೆಗೆ ಒಳಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸುನಿಲ್ ಡಿ.ಸೋಜ ಅವರ ಮಾರ್ಗದರ್ಶನದಲ್ಲಿ ಈಗಾಗಲೇ ವಿಶ್ವಾಸದ ಮನೆಯಲ್ಲಿ 70ಮಂದಿ ಮಾನಸಿಕ ಅಸ್ವಸ್ಥರು ಆಶ್ರಯ ಪಡೆಯುತ್ತಿದ್ದಾರೆ. ಇಲ್ಲಿನ ಆರೈಕೆಯಿಂದ ಈಗಾಗಲೇ 50ಮಂದಿ ಮಾನಸಿಕ ಅಸ್ವಸ್ಥರು ಗುಣಮುಖರಾಗಿ ತಮ್ಮ ಕುಟುಂಬವನ್ನು ಸೇರಲು ಕಾತರದಲ್ಲಿದ್ದಾರೆ. ಆದರೆ ಅವರ ವಿಳಾಸ ಹಾಗೂ ಊರಿನ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ಕಾರಣ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಅಥವಾ ಸಹೃದಯಿಗಳು ಸಹಾಯ ಹಸ್ತ  ನೀಡಿದಲ್ಲಿ ಗುಣಮುಖರಾದ 50 ಮಂದಿಯನ್ನೂ ಕೂಡಾ ಅವರವರ ಮನೆಗೆ ತಲುಪಿಸಲು ಸಿದ್ಧರಿರುವುದಾಗಿ ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ತಿಳಿಸಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.