ಉಡುಪಿ: `ಪ್ರತಿಯೊಂದು ಕೃತಿಗಳಿಗೂ ಅನನ್ಯತೆ ಇದೆ, ಅನನ್ಯತೆಯನ್ನು ಎತ್ತಿ ಹಿಡಿಯುವುದು ಪ್ರಸ್ತುತ' ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೊತ್ತರ ಅಧ್ಯಯನ ಕೇಂದ್ರದ ಡಾ.ಗಣನಾಥ ಎಕ್ಕಾರ್ ಹೇಳಿದರು.
ರಥಬೀದಿ ಗೆಳೆಯರು ಉಡುಪಿ ಮತ್ತು ಚಿತ್ರಕಲಾ ಮಂದಿರ ಕಲಾಶಾಲೆ ಆಶ್ರಯದಲ್ಲಿ ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವೆಂಕಟಗಿರಿ ಕಡೆಕಾರ್ ಅವರ `ಚೆಲುವ ಚೆಲುವೆಯರ' (ಪ್ರಣಯ ಸುನೀತಗಳು) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇತ್ತೀಚಿಗೆ ಪ್ರಕಟವಾಗುವ ಹೊಸ ಲೇಖಕರ ಕವನ, ಕಥಾ ಸಂಕಲನಗಳಲ್ಲಿ ಪ್ರಯೋಗಶೀಲತೆ ಕೊರತೆ ಕಾಣುತ್ತಿದೆ ಹಾಗೂ ಕವಿಗಳಲ್ಲಿ ಒಂದು ರೀತಿಯ ಏಕತಾನತೆಯನ್ನು ಗುರುತಿಸಬಹುದು ಎಂದರು.
ನವೋದಯ ಹಾಗೂ ನವ್ಯಕಾವ್ಯದ ಬರವಣಿಗೆಯಲ್ಲಿ ಓದುಗ- ಕೃತಿಯ ನಡುವೆ ಕಂದರವನ್ನು ನಿರ್ಮಿಸಿದನ್ನು ಕಾಣಬಹುದು. ಪ್ರಾಚೀನ ಸಾಹಿತ್ಯ ಕೃತಿಗಳೂ ಕೂಡಾ ಅಧ್ಯಯನಕ್ಕೆ ಒಳಪಡಬೇಕು, ಅದೇ ರೀತಿ ಆಧುನಿಕ ಕೃತಿಗಳನ್ನು ಪ್ರಯೋಗಕ್ಕೆ ಒಳಪಡಿಸಿ ದಾಗ ಉತ್ತಮ ಕೃತಿಗಳು ಮೂಡಿ ಬರಲು ಸಾಧ್ಯ. ವೆಂಕಟಗಿರಿಯವರು ಕನ್ನಡ ಶಾರಸ್ವತ ಲೋಕಕ್ಕೆ ಭಿನ್ನ ಕೃತಿಯನ್ನು ನೀಡಿದ್ದಾರೆ ಎಂದರು.
ವಿಮರ್ಶಕ ಎ.ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂಐಟಿಯ ಡಾ.ನಿರಂಜನ್ ಜಪಾನಿ ಭಾಷೆಯಲ್ಲಿ ಕನ್ನಡ ವಚನಗಳನ್ನು ಪ್ರಸ್ತುತ ಪಡಿಸಿದರು.
ಚಿತ್ರಕಲಾ ಮಂದಿರ ಕಲಾಶಾಲೆಯ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ರಥಬೀದಿ ಸಂಘಟನೆಯ ಅಧ್ಯಕ್ಷ ಮುರಳೀಧರ ಉಪಾಧ್ಯ ಹಿರಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.