ಕಾರ್ಕಳ: ‘ಆಧುನಿಕತೆಯ ಭರಾಟೆಯಲ್ಲಿ ತುಳುನಾಡಿನ ಆಚಾರ, ವಿಚಾರದಲ್ಲಿ ಸಂಪೂರ್ಣ ಬದಲಾವಣೆಗಳಾಗಿವೆ’ ಎಂದು ಬೆಳ್ಮಣ್ ಸೇಂಟ್ ಜೋಸೆಫ್ ಶಾಲಾ ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ತಿಳಿಸಿದರು.
ತಾಲ್ಲೂಕಿನ ಬೆಳ್ಮಣ್ ಕೃಷ್ಣ ಸಭಾಭವನದಲ್ಲಿ ಬೆಳ್ಮಣ್ ಬಿಲ್ಲವ ಸಮುದಾಯದ ವತಿಯಿಂದ ಹತ್ತು ಗ್ರಾಮಸ್ಥರ ಕೂಡುವಿಕೆಯಿಂದ ಇತ್ತೀಚೆಗೆ ನಡೆದ ಆಟಿಡೊಂಜಿ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದು ಮನೆಗಳು ಹೋಟೆಲ್‌ಗಳಾಗುತ್ತಿವೆ. ತುಳುನಾಡಿನ ಆರೋಗ್ಯ ವರ್ಧಕ ಖಾದ್ಯಗಳ ಸಾಲಿನಲ್ಲಿ ಫಾಸ್ಟ್ಫುಡ್ಗಳು ತುಂಬಿವೆ. ಬದಲಾದ ತಾಯಂದಿರ ಮನಃ ಸ್ಥಿತಿಯಿಂದ ಮಕ್ಕಳಿಗೆ ಮಾತೃಭಾಷೆ ಹಾಗೂ ತಾಯ್ನೆಲದ ಸಂಸ್ಕೃತಿಯ ಪರಿಚಯ ದೂರವಾಗುತ್ತಿದೆ. ಆದರೆ ಆಟಿಡೊಂಜಿ ಕೂಟದಂತಹ ಕಾರ್ಯಕ್ರಮಗಳ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ’ ಎಂದರು.
ಉಡುಪಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸವಿತಾ ಶಿವಾನಂದ್ ಕೋಟ್ಯಾನ್ ಹಾಗೂ ಅಂತರ ರಾಷ್ಟ್ರೀಯ ಕರಾಟೆ ಪಟು ರಂಜಿತಾ ಆರ್ ಪೂಜಾರಿ ಅವರನ್ನು ಸಂಘದ ಗೌರವಾಧ್ಯಕ್ಷ ಎಸ್.ಕೆ.ಸಾಲಿಯಾನ್, ಸಂಜೀವಿ ಸಾಲಿಯಾನ್ ಅಭಿನಂದಿಸಿದರು.
ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಜಯರಾಮ್ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಪ್ರಿಯಾಂಕ ಸುನಿಲ್ ಕುಮಾರ್, ಸುಮಾಕೇಶವ್, ಗೀತಾ, ಶಿವಾನಂದ ಸಾಲಿಯಾನ್, ನಿವೃತ್ತ ಅರಣ್ಯಾಧಿಕಾರಿ ಲೋಕಯ್ಯ ಪೂಜಾರಿ, ಯುವವಿಭಾಗದ ಅಧ್ಯಕ್ಷ ಸಂತೋಷ್ ಪೂಜಾರಿ ನಂದಳಿಕೆ, ಎನ್.ಗೋಪಾಲ್, ಕರುಣಾಕರ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ರಮಿತಾ ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬೋಳ ಸತೀಶ್ ಹಾಗೂ ಸತೀಶ್ ಎರ್ಮಾಳ್ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಿದ ಪೆದ್ಮೆದಿ ಮರ್ದ್, ತಿಮರೆ ಚಟ್ನಿ, ಉರ್ದು ಚಟ್ನಿ, ಕುಕ್ಕುದ ಚಟ್ನಿ, ಪುನರ್ ಪುಳಿ ಚಟ್ನಿ, ನುಗ್ಗೆ ಸೊಪ್ಪಿ, ಬಂಬೆ, ಕುಡು ಚಟ್ನಿ, ಪುಂಡಿ ಗಸಿ, ಉಪ್ಪಡ್ ಪಚ್ಚಿರ್, ಪೆಜಕಾಯಿ ಗಸಿ, ಪತ್ರಡ್ಡೆ, ಪೆಲಕಾಯಿ ಗಟ್ಟಿ, ಬಾಳೆ ಎಲೆ ಗಟ್ಟಿ, ಸಾರ್ನೆಡ್ಡೆ, ಮೆತ್ತದ್ದ ಗಂಜಿ, ಎಟ್ಟಿ ಚಟ್ನಿ ಮೊದಲಾದ ತಿನಿಸುಗಳು ತುಳುವರ ಗಮನ ಸೆಳೆದವು.
ಸಂದೀಪ್ ವಿ.ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ವಸಂತಕುಮಾರ್ ನಿರೂಪಿಸಿದರು. ಸುಜಾತಾ ಇನ್ನಾ ಹಾಡಿದರು. ಸುಭಾಸ್ ನಂದಳಿಕೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.