ಉಡುಪಿ: ‘ತುಳು ಭಾಷೆಯನ್ನು ಉಳಿಸಿ, ಬೆಳೆಸಲು ದೃಶ್ಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ’ ಎಂದು ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ತುಳುಕೂಟ ಉಡುಪಿ ಮಲ್ಪೆ ರಾಮದಾಸ ಸಾಮಗರ ಸಂಸ್ಮರಣಾರ್ಥವಾಗಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿರುವ ಮೂರು ದಿನಗಳ ಯಕ್ಷಗಾನ ಹಬ್ಬವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದೃಶ್ಯ ಮಾಧ್ಯಮಗಳ ಪರಿಣಾಮ ಅಪಾರವಾಗಿದ್ದು, ಟಿ.ವಿಯಲ್ಲಿ ಪ್ರಸಾರವಾಗುವ ಬೇರೆ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ನೋಡುತ್ತ ಅಪರಿಚಿತ ಭಾಷೆಯೊಂದನ್ನು ತಮಗೆ ಗೊತ್ತಿಲ್ಲದ ಹಾಗೆ ಕಲಿಯುತ್ತಿದ್ದಾರೆ. ತುಳು ಭಾಷೆ ಸಹ ಮಾಧ್ಯಮಗಳಲ್ಲಿ ಸಿಗುವಂತಾಗಬೇಕು. ತುಳು ಯಕ್ಷಗಾನಗಳನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮಕ್ಕಳಿಗೆ ಸಹ ಭಾಷೆ ಕಲಿಸಲು ಸಾಧ್ಯವಾಗುತ್ತದೆ.
ಭಾಷೆ ಉಳಿದು, ಬೆಳೆಯಬೇಕಾದರೆ ಮಕ್ಕಳಿಗೆ ಭಾಷೆ ಕಲಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಇಲ್ಲವಾದರೆ ಭಾಷೆ ಅಳಿದು ಹೋಗುವ ಅಪಾಯ ಇರುತ್ತದೆ ಎಂದು ಪ್ರತಿಪಾದಿಸಿದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಎಂ.ಜಿ. ಚೈತನ್ಯ, ಲಯನ್ಸ್ ಜಿಲ್ಲಾ ಗೌರ್ನರ್ ಸುರೇಶ್ ಪ್ರಭು, ಪತ್ರಕರ್ತ ಬಾ. ಸಾಮಗ ಉಪಸ್ಥಿತರಿದ್ದರು.
ಯಕ್ಷಗಾನ ಸಮಿತಿ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಮೋಹನ್ ಶೆಟ್ಟಿ ಪ್ರಾರ್ಥಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.