ADVERTISEMENT

‘ಬಿ.ವಿ ಕಾರಂತರು ದೇಶದ ಆಸ್ತಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 5:01 IST
Last Updated 22 ಡಿಸೆಂಬರ್ 2014, 5:01 IST

ಉಡುಪಿ: ‘ಯಾವುದೇ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ, ಅದರ ರಹಸ್ಯಗಳು ತೆರೆದುಕೊಳ್ಳಲು ಆರಂಭವಾಗುತ್ತವೆ’ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.

ಬೆಂಗಳೂರು ಬಿ.ವಿ. ಕಾರಂತ ರಂಗ ಪ್ರತಿಷ್ಠಾನ ಮತ್ತು ರಂಗಭೂಮಿ ಉಡುಪಿ ಸಂಯುಕ್ತವಾಗಿ ನಗರದ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬಿ.ವಿ. ಕಾರಂತರ ಕುರಿತ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಗುಂಡು ರಾಯರ ‘ದೀಪಾವಳಿ ಮತ್ತು ಇತರ ನಾಟಕಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾಟಕ ಏನು ಮಾಡಬೇಕು ಎಂಬುದನ್ನು ನಾಟಕ ಮಾಡುತ್ತಲೇ ತಿಳಿಯಬಹುದು. ಮನುಷ್ಯನ ವಿಚಿತ್ರವಾದ ನಾಟಕೀಯ ಗುಣಗಳನ್ನು ನಾಟಕಕಾರರು ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ವಿಮರ್ಶಕ ಡಾ. ಮುರುಳೀಧರ್‌ ಉಪಾಧ್ಯ ಮಾತನಾಡಿ, ಬಿ.ವಿ. ಕಾರಂತರು ಇಡೀ ದೇಶದ ಆಸ್ತಿ. ಅವರನ್ನು ಮುಂದಿನ ತಲೆಮಾರಿಗೂ ತಲುಪಿ ಸಬೇಕಾದರೆ, ಅವರ ಅಳಿದುಳಿದ ದಾಖಲೆಗಳನ್ನು ಅಂತರ್ಜಾಲಕ್ಕೆ ಸೇರಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ನಾಟಕದಲ್ಲಿ ನಿರ್ದೇಶಕರಿಗೆ ಸ್ಥಾನಮಾನ ತಂದು ಕೊಟ್ಟ ಕಾರಂತರು, ಭಾಷಾಂತರ ಮತ್ತು ರಂಗಭೂಮಿ ಯ ಪ್ರೀತಿಯಿಂದ ರಂಗಭೂಮಿಗೆ ಅಖಿಲ ಭಾರತ ಮನ್ನಣೆಯನ್ನು ತಂದುಕೊಟ್ಟರು. ಮಕ್ಕಳ ನಾಟಕ ಗಳಲ್ಲಿ ಪವಾಡ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದಲ್ಲದೇ, ರಂಗ ಸಂಗೀತವನ್ನು ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾಗಿ ಬೆಳೆಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಗುರುರಾಜ ಮಾರ್ಪಳ್ಳಿ ಮಾತನಾಡಿ, ಉತ್ತರ ಭಾರತದವರು ನಾಟಕ ನೋಡುವ ರೀತಿಗೂ ನಾವು ನೋಡುವ ರೀತಿಗೂ ಬಹಳ ವ್ಯತ್ಯಾಸವಿದೆ. ಆದರೆ ಬಿ.ವಿ. ಕಾರಂತರನ್ನು ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿಯವರು ಅಧ್ಯಯನ ಮಾಡಿದ್ದಾರೆ. ಹಾಗೆಯೇ ಅವರ ನಾಟಕಗಳಲ್ಲಿಯೂ ಹಿಂದಿಯ ವರಸೆ ಇತ್ತು ಎಂದರು.

ಕಾರಂತರು ರಾಗಸಂಯೋಜನೆಯಲ್ಲಿ ಹೊಸ ಆವಿ ಷ್ಕಾರವನ್ನು ಮಾಡುವುದರೊಂದಿಗೆ ದಾಸ ಸಂಗೀತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ದೇಶದಲ್ಲಿ ಸಿದ್ಧಾಂತಗಳನ್ನು ಮೀರಿ ಕೆಲಸ ಮಾಡುವುದು ಸಂಗೀತ ಮಾತ್ರ. ಹಾಗಾಗಿ ಕಾರಂತರ ಸಂಗೀತವನ್ನು ಲಘುವಾಗಿ ನುಡಿಸುವುದು ಅಷ್ಟು ಸರಿಯಲ್ಲ ಎಂದು ಹೇಳಿದರು.

ರಂಗಭೂಮಿ ಉಡುಪಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಬಿ.ಆರ್‌. ವೆಂಕಟರಮಣ ಐತಾಳ್‌ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋ ಧನಾ ಕೇಂದ್ರದ ನಿರ್ದೇಶಕ ಹೇರಂಜೆ ಕೃಷ್ಣ ಭಟ್‌ ಸ್ವಾಗತಿಸಿದರು, ಕೆ.ಜಿ. ಕೃಷ್ಣಮೂರ್ತಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.