ADVERTISEMENT

ಉಡುಪಿ ಕೃಷ್ಣಮಠದ ನಿರ್ವಹಣೆಗೆ ₹ 15 ಲಕ್ಷ ಸಾಲ

ಸಧ್ಯ ದೇವರ ದರ್ಶನ ಇಲ್ಲ; ಕೃಷ್ಣ ಜನ್ಮಾಷ್ಟಮಿಯೂ ಸರಳ: ಅದಮಾರು ಶ್ರೀ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 14:20 IST
Last Updated 31 ಆಗಸ್ಟ್ 2020, 14:20 IST
ಉಡುಪಿ ಕೃಷ್ಣಮಠ
ಉಡುಪಿ ಕೃಷ್ಣಮಠ    

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ ಶ್ರೀಕೃಷ್ಣಮಠದ ನಿರ್ವಹಣೆಗಾಗಿ ಬ್ಯಾಂಕ್‌ನಿಂದ ₹ 15 ಲಕ್ಷ ಸಾಲ ಪಡೆಯಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಸೋಮವಾರ ಕೃಷ್ಣಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘₹ 1 ಕೋಟಿ ಸಾಲಕ್ಕೆ ಬೇಡಿಕೆ ಇಡಲಾಗಿತ್ತು. ಸದ್ಯ ₹ 15 ಲಕ್ಷ ಸಿಕ್ಕಿದ್ದು, ಮುಂದೆ ಅನಿವಾರ್ಯತೆಗೆ ಅನುಗುಣವಾಗಿ ಸಾಲ ಪಡೆದುಕೊಳ್ಳಲಾಗುವುದು ಎಂದರು.

ಸಾಲ ಪಡೆಯುತ್ತಿರುವುದು ಮೊದಲೇನಲ್ಲ.ಹಿಂದೆ, ಅದಮಾರು ಮಠದ ಪರ್ಯಾಯ ಸಂದರ್ಭ ವಿಭುದೇಶ ತೀರ್ಥರು ಮಠದ ನಿರ್ವಹಣೆಗೆ ₹ 60 ಲಕ್ಷ ಸಾಲ ಮಾಡಿದ್ದರು. ಪರ್ಯಾಯ ಮುಗಿಯುವ ಹೊತ್ತಿಗೆ ₹ 25 ಲಕ್ಷ ಸಾಲದ ಹೊರೆ ಅವರ ಮೇಲಿತ್ತು. ನಿಧಾನವಾಗಿ ಸಾಲ ತೀರಿಸಿದರು ಎಂದರು.

ADVERTISEMENT

ಮಠದಲ್ಲಿ ಹಣದ ಕೊರತೆ ಎದುರಾಗಿದೆ ಎಂದರ್ಥವಲ್ಲ. ಮಠದಲ್ಲಿ ಮೂಲನಿಧಿ ಇದ್ದು, ಸಧ್ಯ ಬಳಸುತ್ತಿಲ್ಲವಷ್ಟೆ. ಸಾಲದ ಹೊರೆ ಇದ್ದರೆ ತೀರಿಸುವ ಹೊಣೆಗಾರಿಕೆಯೂ ಹೆಚ್ಚಾಗಿರುತ್ತದೆ ಎಂಬ ಕಾರಣಕ್ಕೆ ಸಾಲ ಪಡೆಯಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಅದಮಾರು ಮಠದ ಆಡಳಿತಕ್ಕೊಳಪಟ್ಟಿರುವ ಹಲವು ಶಿಕ್ಷಣ ಸಂಸ್ಥೆಗಳಿರುವಾಗ ಸಾಲ ಮಾಡಬೇಕಾದ ಅನಿವಾರ್ಯತೆ ಏನಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಮಠದ ಪರಂಪರೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಠದಿಂದ ಆರ್ಥಿಕ ನೆರವು ಕೊಡಲಾಗಿದೆಯೇ ಹೊರತು, ಅಲ್ಲಿಂದ ಪಡೆದಿಲ್ಲ ಎಂದರು.

ಸದ್ಯದೇವರ ದರ್ಶನ ಇಲ್ಲ:

ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಸಧ್ಯ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಸೆ.11ರಂದು ನಡೆಯುವ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಕೂಡ ಸರಳವಾಗಿ ನಡೆಯಲಿದೆ. ಜಿಲ್ಲಾಡಳಿತದ ನಿಯಮಗಳಂತೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.