ADVERTISEMENT

ನಾಲ್ವರ ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆಯಾಗಲಿ- ಅಬ್ದುಲ್ ಅಜೀಮ್

ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:28 IST
Last Updated 28 ನವೆಂಬರ್ 2023, 15:28 IST
ಉಡುಪಿ ನೇಜಾರಿಗೆ ಮಂಗಳವಾರ ಭೇಟಿನೀಡಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು
ಉಡುಪಿ ನೇಜಾರಿಗೆ ಮಂಗಳವಾರ ಭೇಟಿನೀಡಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು   

ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಆರೋಪಿಗೆ ಮರಣದಂಡನೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಒತ್ತಾಯಿಸಿದರು.

ಮಂಗಳವಾರ ಮೃತರ ಕುಟುಂಬ ಸದಸ್ಯರನ್ನು ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಾಮಾನ್ಯವಾಗಿ ಕೊಲೆ ನಡೆದರೆ ಪೊಲೀಸರು 302 ಸೆಕ್ಷನ್ ಅಡಿ ಪ್ರಕರಣ ದಾಖಲಿಸುತ್ತಾರೆ. ಅಪರಾಧ ಸಾಬೀತಾದರೆ ಆರೋಪಿಗೆ ಗರಿಷ್ಠ ಜೀವಾವಧಿ ಶಿಕ್ಷೆಯಾಗುತ್ತದೆ. 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಆರೋಪಿ ಬಿಡುಗಡೆಯಾಗುತ್ತಾನೆ.

ಆದರೆ, ನೇಜಾರಿನಲ್ಲಿ ನಡೆದಿರುವ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಅಪರೂಪದ ಪ್ರಕರಣ ಎಂದು ಪರಿಗಣಿಸಿ ತನಿಖೆಯ ಮೂಲಕ ಆರೋಪಿಯ ಬರ್ಬರ ಕೃತ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಆರೋಪಿಗೆ ಮರಣದಂಡನೆಯಾಗುವಂತೆ ನೋಡಿಕೊಳ್ಳಬೇಕು. ಪ್ರಕರಣದ ಮೇಲ್ವಿಚಾರಣೆಯನ್ನು ಪಶ್ಚಿಮ ವಲಯ ಐಜಿಪಿ ವಹಿಸಿಕೊಳ್ಳಬೇಕು. ವರ್ಷದೊಳಗೆ ತನಿಖೆ ಪೂರ್ಣಗೊಂಡು ವಿಶೇಷ ನ್ಯಾಯಾಲಯದ ಮುಂದೆ ದೋಷಾರೋಪಣೆ ವರದಿ ಸಲ್ಲಿಕೆಯಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ಆರೋಪಿ ಪೂರ್ವ ತಯಾರಿ ಮಾಡಿಕೊಂಡೇ ಘೋರ ಕೃತ್ಯ ಎಸಗಿದ್ದಾನೆ. ಯುವತಿ ಅಯ್ನಾಜ್‌ಗೆ 10 ರಿಂದ 15 ಬಾರಿ ಬರ್ಬರವಾಗಿ ಚೂರಿಯಿಂದ ಇರಿದಿದ್ದಾನೆ ಎಂದರು.

‘ಸರ್ಕಾರ ಸಂತ್ರಸ್ಥರ ಪರವಾಗಿ ನಿಲ್ಲಬೇಕು. ನೂರ್ ಅಹಮದ್ ಅವರ ಹಿರಿಯ ಪುತ್ರ ಮೊಹಮ್ಮದ್ ಅಸಾದ್‌ಗೆ ಪರಿಹಾರದ ಭಾಗವಾಗಿ ಇನ್‌ಸ್ಪೆಕ್ಟರ್‌ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ಇದರಿಂದ ಸರ್ಕಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ನಂಬಿಕೆ ಬರುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಅಬ್ದುಲ್ ಅಜೀಮ್ ತಿಳಿಸಿದರು.

ಕುಸಿದುಬಿದ್ದ ತಂದೆ: ಹತ್ಯೆ ನಡೆದ ಸ್ಥಳ ಹಾಗೂ ಮೊಬೈಲ್‌ನಲ್ಲಿ ಮೃತ ಕುಟುಂಬ ಸದಸ್ಯರ ಫೋಟೊಗಳನ್ನು ತೋರಿಸುವಾಗ ದುಃಖ ತಡೆಯಲಾಗದೆ ತಂದೆ ನೂರ್ ಅಹಮದ್‌ ಸ್ಥಳದಲ್ಲಿಯೇ ಕುಸಿದುಬಿದ್ದರು. ಕೂಡಲೇ ಅವರನ್ನು ಮೇಲೆತ್ತಿ ಸಂತೈಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.