ಉಡುಪಿ: ಕೃಷ್ಣನೂರಿನಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಕಳೆಗಟ್ಟುತ್ತಿದೆ. ಬುಧವಾರ ಭಾವಿ ಪರ್ಯಾಯ ಪೀಠಾಧಿಪತಿ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥ ಸ್ವಾಮೀಜಿಯ ಪುರಪ್ರವೇಶ ವೈಭವದಿಂದ ನೆರವೇರಿತು.
ಅದಮಾರು ಮಠದಿಂದ ಜೋಡುಕಟ್ಟೆ ಬಳಿಯ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳಿಗೆ ಜಿಲ್ಲಾಡಳಿತದಿಂದ ಸ್ವಾಗತ ಕೋರಲಾಯಿತು. ಬಳಿಕ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಬಳಿಕ ಪುರಪ್ರವೇಶ ಮೆರವಣಿಗೆ ಆರಂಭವಾಯಿತು. ದೇವಸ್ಥಾನದ ಮುಂದೆ ಕುಳಿತು ಮೆರವಣಿಗೆಯನ್ನು ಕಣ್ತುಂಬಿಕೊಂಡ ಶ್ರೀಗಳು ಬಳಿಕ ಸಾವಿರಾರು ಭಕ್ತರೊಂದಿಗೆ ಮಠದ ಕಡೆ ಹೆಜ್ಜೆ ಹಾಕಿದರು.
ಕಲಾಲೋಕ ಸೃಷ್ಟಿ:ನಗರದ ಮುಖ್ಯರಸ್ತೆಯ ಉದ್ದಕ್ಕೂಚಾಚಿಕೊಂಡಿದ್ದ ಪುರಪ್ರವೇಶ ಮೆರವಣಿಗೆ ಕಲಾಲೋಕವನ್ನೇ ಸೃಷ್ಟಿಸಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಕಲಾತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು. ಎಲ್ಲೆಡೆಕೃಷ್ಣನ ನಾಮಸ್ಮರಣೆ ಅನುರಣಿಸಿತು. ಮೆರವಣಿಗೆಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಸೇರಿತ್ತು. ಒಂಟೆ ಹಾಗೂ ಕುದುರೆಗಳು ಮೆರವಣಿಗೆಯ ಸಾರಥಿಗಳಾಗಿದ್ದವು.
ಕಾಲ್ನಡಿಗೆಯಲ್ಲಿ ಪುರಪ್ರವೇಶ:ಸಾಮಾನ್ಯವಾಗಿ ತೆರೆದ ವಾಹನದಲ್ಲಿ ಭಾವಿ ಪರ್ಯಾಯ ಪೀಠಾಧಿಪತಿಗಳನ್ನು ಮೆರವಣಿಗೆಯ ಮೂಲಕ ಮಠಕ್ಕೆ ಕರೆತರಲಾಗುತ್ತದೆ. ಆದರೆ, ಈ ಬಾರಿ ಈಶಪ್ರಿಯ ತೀರ್ಥರು ಕಾಲ್ನಡಿಗೆಯಲ್ಲಿ ಪುರಪ್ರವೇಶಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಸಂಜೆಯ ಹೊತ್ತಿಗೆ ಕೃಷ್ಣಮಠದ ರಥಬೀದಿ ಪ್ರವೇಶಿಸಿದ ಶ್ರೀಗಳಿಗೆ ಪರ್ಯಾಯ ಪಲಿಮಾರು ಶ್ರೀಗಳು ಸ್ವಾಗತ ಕೋರಿದರು. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದ ಬಳಿಕ ಅದಮಾರು ಮಠ ಪ್ರವೇಶಿಸಿದರು. ಈ ಸಂದರ್ಭ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ಅರಳು ಎರಚಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಪಟ್ಟದ ದೇವರಾದ ಕಾಳಿಂಗ ಮರ್ಧನನಿಗೆ ಪೂಜೆ ಸಲ್ಲಿಸಿದ ಅದಮಾರು ಶ್ರೀಗಳು ರಾತ್ರಿ 8.30ಕ್ಕೆ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಡೆದ ಅಭಿವಂದನೆ ಹಾಗೂ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಲಾ ಪ್ರಕಾರಗಳು
ಚಿಲಿಪಿಲಿ ಗೊಂಬೆ, ಹಲಿವೇಷ, ದಾಂಡಿಯಾ, ಚಂಡೆ ಸಹಿತ ಕೋಲಾಟ, ಕೊಡೆ ಕುಣಿತ, ಕಂಗೀಲು, ಗೊಂಬೆ ವೇಷ, ಪಂಚವಾದ್ಯ, ಗಣೇಶ ನೃತ್ಯ, ಲಾವಣಿ, ಕೋಲಾಟ, ಗರ್ಬಾ, ಗೂಮರ್, ಹುಲಿವೇಷ, ಸಾಂಪ್ರದಾಯಿಕ ಉಡುಗೆ, ಭಜೆ, ಕಂಸಾಳೆ, ಮಣಿಪುರಿ ನೃತ್ಯ, ಕಥಕ್ಕಳಿ, ಕೃಷ್ಣ ಗೋಪಿಕೆಯರು, ಕಲಶ, ನಾಗಸ್ವರ, ಸಮೂಹ ನೃತ್ಯ, ಬ್ಯಾಂಡ್, ಸ್ಯಾಕ್ಸೋಫೋನ್, ವೇದಘೋಷಗಳು ಗಮನ ಸೆಳೆದವು.
ಪ್ಲಾಸ್ಟಿಕ್ ನಿಷೇಧ
ಪುರ ಪ್ರವೇಶ ಮೆರವಣಿಗೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಬಳಸದೆ ಪರಿಸರ ಪ್ರೇಮ ಮೆರೆಯಲಾಯಿತು. ಜತೆಗೆ, ಮೆರವಣಿಗೆಯಲ್ಲಿ ಪರಿಸರ ಕಾಳಜಿಯುಳ್ಳ ಹಾಗೂ ಕೋಮು ಸಾಮರಸ್ಯ ಗಟ್ಟಿಗೊಳಿಸುವ ಬರಹಗಳು ಎಲ್ಲರ ಗಮನ ಸೆಳೆದವು.
ಮುಸ್ಲಿಮರಿಂದ ತಂಪು ಪಾನೀಯ
ಅದಮಾರು ಶ್ರೀಗಳ ಪುರಪ್ರವೇಶ ಅಂಗವಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮುಸ್ಲಿಮರು ತಂಪು ಪಾನೀಯ ವಿತರಿಸಿ ಸೌಹಾರ್ದ ಮೆರೆದರು. ಪ್ರತಿ ಪರ್ಯಾಯ ಮಹೋತ್ಸವದಲ್ಲಿ ಮುಸ್ಲಿಮರು ಕೂಡ ಭಾಗವಹಿಸಿ ಸಂಭ್ರಮಿಸುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.