ಉಡುಪಿ: ಶ್ರೀಕೃಷ್ಣಮಠದ ಪರಂಪರೆಯಂತೆ ಮುಂದಿನ ಅದಮಾರು ಮಠದ ಪರ್ಯಾಯೋತ್ಸವದ ಪೂರ್ವ ತಯಾರಿಗಳು ಆರಂಭವಾಗಿದ್ದು ಜುಲೈ 4ರಂದು ಬೆಳಿಗ್ಗೆ 8ಕ್ಕೆ ಕಟ್ಟಿಗೆ ಮುಹೂರ್ತ ನೆರವೇರಲಿದೆ.
ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ವಿಧಿವಿಧಾನ ಬೆಳಿಗ್ಗೆ 9.10ಕ್ಕೆ ಕೊನೆಗೊಳ್ಳಲಿದೆ. ಮಠದ ಭಕ್ತರು, ಶಿಷ್ಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅದಮಾರು ಮಠದ ಪ್ರಕಟಣೆ ತಿಳಿಸಿದೆ.
ಪರ್ಯಾಯ ಆರಂಭಕ್ಕೂ ಮುನ್ನ ಹಲವು ವಿಧಿವಿಧಾನಗಳು ನಡೆಯುವುದು ಸಂಪ್ರದಾಯ. ಅದರಂತೆ ಕಳೆದ ಡಿಸೆಂಬರ್ 14ರಂದು ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಜನವರಿ 31ರಂದು ಅಕ್ಕಿ ಮುಹೂರ್ತ ನೆರವೇರಿಸಲಾಗಿತ್ತು.
ಅಂದುಬೆಳಿಗ್ಗೆ 9.50ರ ಶುಭ ಮುಹೂರ್ತದಲ್ಲಿ ಅದಮಾರು ಮಠದ ಹಿರಿಯ ಯತಿ ವಿಶ್ಪಪ್ರಿಯ ತೀರ್ಥರು ಹಾಗೂ ಕಿರಿಯ ಯತಿ ಈಶಪ್ರಿಯ ತೀರ್ಥರು ಜಂಟಿಯಾಗಿ ಅಕ್ಕಿಮುಹೂರ್ತಕ್ಕೆ ಚಾಲನೆ ನೀಡಿದ್ದರು.
2020ರ ಜನವರಿ 18ರಿಂದ ಅದಮಾರು ಮಠದ ಶ್ರೀಕೃಷ್ಣ ಪೂಜೆಯ ಪರ್ಯಾಯ ಆರಂಭವಾಗಲಿದೆ. ಪರ್ಯಾಯಕ್ಕೆ ವರ್ಷ ಮುಂಚಿತವಾಗಿ ಸಿದ್ಧತೆಗಳು ಆರಂಭವಾಗುತ್ತವೆ.
ಮೊದಲಿಗೆ ಬಾಳೆ ಮುಹೂರ್ತದಿಂದ ಆರಂಭಗೊಂಡು, ಅಕ್ಕಿ, ಕಟ್ಟಿಗೆ ಹಾಗೂ ಭತ್ತ ಮುಹೂರ್ತ ನಡೆಯಲಿವೆ. ಪರ್ಯಾಯದ ಅವಧಿಯಲ್ಲಿ ಭಕ್ತರಿಗೆ ಅನ್ನದಾಸೋಹಕ್ಕೆ ಅಗತ್ಯವಾದ ಪರಿಕರಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವುದು ಈ ಮುಹೂರ್ತಗಳ ಹಿಂದಿರುವ ಉದ್ದೇಶ. ಪರ್ಯಾಯ ಆರಂಭದ ಹೊತ್ತಿಗೆ ಭತ್ತ ಮುಹೂರ್ತ ಕೂಡ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.