ಉಡುಪಿ: ಅದಮಾರು ಮಠದ ಈಶಪ್ರಿಯ ತೀರ್ಥರು ಶನಿವಾರ ಬೆಳಗಿನ ಜಾವ 5.57ರ ಶುಭ ಮುಹೂರ್ತದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಪಲಿಮಾರು ಮಠದ ಪರ್ಯಾಯ ಅವಧಿ ಕೊನೆಗೊಂಡು ಅದಮಾರು ಮಠದ ಪರ್ಯಾಯ ಪರ್ವಕ್ಕೆ ಚಾಲನೆ ದೊರೆಯಿತು.
ವೇದ–ಮಂತ್ರ ಘೋಷಗಳ ಮಧ್ಯೆ ಪರ್ಯಾಯ ಪೀಠ ಅಲಂಕರಿಸಿದ ಅದಮಾರು ಯತಿಗಳು ಮುಂದಿನ 2 ವರ್ಷಗಳ ಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಲಿದ್ದಾರೆ. ಈ ಅವಧಿಯಲ್ಲಿ ಕೃಷ್ಣಮಠದ ಸಂಪೂರ್ಣ ಆಡಳಿತ ಶ್ರೀಗಳ ಹೆಗಲೇರಲಿದೆ.
ಪರ್ಯಾಯ ಪೀಠಾರೋಹಣಕ್ಕೂ ಮುನ್ನ:ಅಷ್ಟಮಠಗಳ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥಕ್ಕೆ ತೆರಳಿದ ಅದಮಾರು ಶ್ರೀಗಳು ಮಧ್ಯರಾತ್ರಿ 1.15ಕ್ಕೆ ಪವಿತ್ರ ಸ್ನಾನ ಮುಗಿಸಿ, ಜಪತಪ ಮಾಡಿದರು. ಬಳಿಕ ಪಟ್ಟದ ದೇವರಿಗೆ ಹಾಗೂ ದಂಡತೀರ್ಥ ಮಠದ ದೇವರಿಗೆ ಪೂಜೆ ಸಲ್ಲಿಸಿ ಉಡುಪಿಯತ್ತ ಪ್ರಯಾಣ ಬೆಳೆಸಿದರು.
ನಸುಕಿನ 2 ಗಂಟೆಯ ಹೊತ್ತಿಗೆ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಅಷ್ಠಮಠಗಳ ಯತಿಗಳು ಉಪಸ್ಥಿತರಿದ್ದರು.2.15ಕ್ಕೆ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಗೆ ಚಾಲನೆ ದೊರೆಯಿತು.
ಪಲ್ಲಕ್ಕಿ ಏರಿದ ಯತಿಗಳು:ಈ ಬಾರಿಯ ಪರ್ಯಾಯ ಮೆರವಣಿಗೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಮೊದಲಿಗೆ ಬಿರುದಾವಳಿ, ಜಾನಪದ ಕಲಾ ತಂಡಗಳು ಸಾಗಿದ ನಂತರ ಪರ್ಯಾಯ ಈಶಪ್ರಿಯ ತೀರ್ಥರನ್ನು ಮೇನೆಯಲ್ಲಿ (ಪಲ್ಲಕ್ಕಿ) ಹೊತ್ತೊಯ್ಯಲಾಯಿತು.
ಬಗೆಬಗೆಯ ಹೂಗಳಿಂದ ಅಲಂಕೃತಗೊಂಡಿದ್ದ ಮೇನೆಯಲ್ಲಿ ಕುಳಿತ ಶ್ರೀಗಳು ತಲೆಗೆ ಪೇಟ ಹಾಗೂ ಕೈನಲ್ಲಿ ದಂಡ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಶಿಷ್ಟಾಚಾರದಂತೆ ಇತರ ಮಠಗಳ ಯತಿಗಳು ವಾಹನ ಸಹಿತ ಮೇನೆಯಲ್ಲಿ ತೆರಳಿದರು.
ಪಲಿಮಾರು ಶ್ರೀಗಳ ಸ್ವಾಗತ:ಮೆರವಣಿಗೆ ಬೆಳಗಿನ ಜಾವ ಕೃಷ್ಣಮಠ ತಲುಪಿತು. ಬೆಳಿಗ್ಗೆ 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದ ಶ್ರೀಗಳು, ಬಳಿಕ ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರ ದೇವರ ದರ್ಶನ ಮಾಡಿದರು.
5.30ಕ್ಕೆ ಕೃಷ್ಣಮಠ ಪ್ರವೇಶಿಸಿದಾಗ ಪಲಿಮಾರು ವಿದ್ಯಾಧೀಶ ಶ್ರೀಗಳು ಸ್ವಾಗತ ಕೋರಿದರು. ಗರ್ಭಗುಡಿಯ ನವಗ್ರಹ ಕಿಂಡಿಯ ಮೂಲಕ ಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಮುಖ್ಯಪ್ರಾಣ ಹಾಗೂ ಗರುಡ ದೇವರಿಗೆ ಪೂಜೆ ಸಲ್ಲಿಸಿದರು.
ಅಕ್ಷಯ ಪಾತ್ರೆ ಸುಟ್ಟುಗ ಕೀಲಿಕೈ ಹಸ್ತಾಂತರ:ಬೆಳಗಿನ 5.57ರ ಶುಭ ಮುಹೂರ್ತದಲ್ಲಿ ಪಲಿಮಾರು ಶ್ರೀಗಳು ಅಕ್ಷಯಪಾತ್ರೆ, ಸುಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈಯನ್ನು ಅದಮಾರು ಮಠದ ಈಶಪ್ರಿಯ ತೀರ್ಥರಿಗೆ ಕೊಟ್ಟು ಕೃಷ್ಣ ಪೂಜಾ ಕೈಂಕರ್ಯದ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಬಳಿಕ ಅದಮಾರು ಹಿರಿಯ ಯತಿ ವಿಶ್ವಪ್ರಿಯ ತೀರ್ಥರು ಮೊದಲು ಸರ್ವಜ್ಞ ಪೀಠದಲ್ಲಿ ಕುಳಿತು ಬಳಿಕ ಶಿಷ್ಯರಾದ ಈಶಪ್ರಿಯ ತೀರ್ಥರಿಗೆ ಸರ್ವಜ್ಞ ಪೀಠವೇರಲು ಅವಕಾಶ ನೀಡಿದರು. ಈ ಸಂದರ್ಭ ವೇದಘೋಷಗಳು ಮೊಳಗಿದವು. ಅದಮಾರು ಪರ್ಯಾಯಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಮೊದಲ ಪೂಜೆ:ಸರ್ವಜ್ಞ ಪೀಠಾರೋಹಣದ ಬಳಿಕ ಅದಮಾರು ಶ್ರೀಗಳು ಬೆಳಿಗ್ಗೆ 10ಕ್ಕೆ ಕೃಷ್ಣನಿಗೆ ಮೊದಲ ಪರ್ಯಾಯ ಮಹಾಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.