ADVERTISEMENT

ಪೇಜಾವರ ಶ್ರೀಗಳ ಹೇಳಿಕೆಗೆ ಬೆಂಬಲ: ಅದಮಾರು ಶ್ರೀ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 14:04 IST
Last Updated 26 ಮಾರ್ಚ್ 2021, 14:04 IST
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ   

ಉಡುಪಿ: ಈಚೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ನೀಡಿದ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಟೀಕೆಗಳು ವ್ಯಕ್ತವಾಗಿವೆ. ಹಿರಿಯ ಶ್ರೀಗಳ ಹೇಳಿಕೆಗೆ ಪೂರ್ಣ ಪ್ರಮಾಣದ ಬೆಂಬಲವಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ಪ್ರತಿರೋಧ ತೋರದ ಚಿಕ್ಕ ಸಮಾಜದ ಮೇಲೆ ಟೀಕೆಗಳನ್ನು ಮಾಡುವುದು ಸರಿಯಲ್ಲ. ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವ ವ್ಯಕ್ತಿಗಳು, ನೀಡುವ ಹೇಳಿಕೆಗಳಿಂದ ಸಮಾಜದ ಮೇಲೆ ಬೀರಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅರಿತು ಮಾತನಾಡಬೇಕು’ ಎಂದು ಸ್ವಾಮೀಜಿ ಹೇಳಿದರು.

ಹಿರಿಯರ ಕಣ್ಗಾವಲಿನಲ್ಲಿ ಮಕ್ಕಳು ಬೆಳೆಯುತ್ತಿಲ್ಲ, ಶಿಕ್ಷಣದಲ್ಲಿ ಮೌಲ್ಯಗಳು ಸಿಗುತ್ತಿಲ್ಲ. ದಾರಿತಪ್ಪಿ ಹೋಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ಒಳ್ಳೆಯ ಮಾರ್ಗದಲ್ಲಿ ಸಾಗಬೇಕು ಎಂಬ ಕಾಳಜಿಯಿಂದ ಪೇಜಾವರ ಶ್ರೀಗಳು ಪೋಷಕರಿಗೆ ಹಾಗೂ ಸಮಾಜಕ್ಕೆ ಸಲಹೆಗಳನ್ನು ನೀಡಿದ್ದಾರೆ. ಕೆಲವರು ಪ್ರಸಿದ್ಧಿಗೆ ಬರಲು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮಕ್ಕಳು ತೆಗೆದುಕೊಳ್ಳುತ್ತಿರುವ ಆತುರದ ನಿರ್ಧಾರಗಳಿಂದ ಅನಾಹುತಗಳು ಸಂಭವಿಸುತ್ತಿವೆ. ತಂದೆ–ತಾಯಿಗಳಿಂದ ದೂರವಾಗಿ ಪರಿತಪಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂಬ ದೃಷ್ಟಿಯಿಂದ ಪೇಜಾವರ ಶ್ರೀಗಳು ಸಲಹೆಗಳನ್ನು ನೀಡಿದ್ದಾರಷ್ಟೆಎಂದುಸಮರ್ಥಿಸಿಕೊಂಡರು.

ಮಕ್ಕಳಿಗೆ ಶಿಕ್ಷಣದಲ್ಲಿ ಒಳ್ಳೆಯ ಅಂಶಗಳು ಸಿಗಬೇಕು. ಬದಲಾಗಿ ಪಠ್ಯದಲ್ಲಿ ‘ಯಜ್ಞ ಸರಿಯಿಲ್ಲ’ ಎಂಬ ವಿಚಾರಗಳನ್ನು ಹೇಳಿಕೊಡಲಾಗುತ್ತಿದೆ. ಪಠ್ಯದಲ್ಲಿಒಳ್ಳೆಯ ವಿಚಾರಗಳು ಇರಬೇಕೇ ವಿನಾ,ಅನಗತ್ಯವಿಚಾರಗಳಲ್ಲ. ಪೋಷಕರು ಕೂಡ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು. ಇದರಿಂದ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.