ADVERTISEMENT

ಪರ್ಯಾಯಕ್ಕೆ ಮೊದಲ ಹೊರೆಕಾಣಿಕೆ

ಮಲ್ಪೆ ವಲಯದಿಂದ ಸಲ್ಲಿಕೆ: ಮೆರವಣಿಗೆಯಲ್ಲಿ ಗಮನ ಸೆಳೆದ ಮಟ್ಟುಗುಳ್ಳ ದೋಣಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 10:14 IST
Last Updated 17 ಜನವರಿ 2020, 10:14 IST
ನಗರದ ಜೋಡುಕಟ್ಟೆಯಿಂದ ಹೊರೆಕಾಣಿಕೆಯನ್ನು ಹೊತ್ತ ರೈತ ಮಹಿಳೆಯರು ಕೃಷ್ಣಮಠದತ್ತ ಹೆಜ್ಜೆ ಹಾಕಿದರು. ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ನಗರದ ಜೋಡುಕಟ್ಟೆಯಿಂದ ಹೊರೆಕಾಣಿಕೆಯನ್ನು ಹೊತ್ತ ರೈತ ಮಹಿಳೆಯರು ಕೃಷ್ಣಮಠದತ್ತ ಹೆಜ್ಜೆ ಹಾಕಿದರು. ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಬುಧವಾರ ಮಲ್ಪೆಯಿಂದ ಮೊದಲ ಹೊರೆಕಾಣಿಕೆ ಸಮರ್ಪಿಸಲಾಯಿತು. ಮಲ್ಪೆಯಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಭಜನಾ ಮಂಡಳಿಗಳ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ವಾಹನಗಳು ಹೊರೆಕಾಣಿಕೆಯನ್ನು ತುಂಬಿಕೊಂಡು ಉಡುಪಿಯ ಜೋಡುಕಟ್ಟೆ ತಲುಪಿದವು. ಅಲ್ಲಿಂದ ಮೆರವಣಿಗೆಯ ಮೂಲಕ ಹೊರೆಕಾಣಿಕೆಯನ್ನು ಕೃಷ್ಣಮಠದ ಪಾರ್ಕಿಂಗ್ ಪ್ರದೇಶಕ್ಕೆ ತರಲಾಯಿತು.

ಮಟ್ಟುಗುಳ್ಳ ದೋಣಿ: ಕರಾವಳಿಯ ಪ್ರಸಿದ್ಧ ಹಾಗೂ ಭೌಗೋಳಿಕ ಮಾನ್ಯತೆ ಪಡೆದಿರುವ ಮಟ್ಟು ಗುಳ್ಳ ಬದನೆಯ ದೋಣಿ ಹೊರೆಕಾಣಿಕೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಮಟ್ಟುಗುಳ್ಳ ಬೆಳೆಗಾರರ ಸಂಘದಿಂದ ಬೆಳೆದ ಮಟ್ಟುಗುಳ್ಳವನ್ನು ಹೊರೆಕಾಣಿಕೆಗೆ ಸಮರ್ಪಿಸಲಾಯಿತು.

ADVERTISEMENT

ಹಸಿರು ಶಾಲು ಹೊದ್ದ ರೈತ ಮಹಿಳೆಯರು ಬುಟ್ಟಿಯಲ್ಲಿ ಹೊರೆಕಾಣಿಕೆ ಹೊತ್ತು ಸಾಗಿದ ದೃಶ್ಯ ಆಕರ್ಷಕವಾಗಿತ್ತು. 100ಕ್ಕೂ ಹೆಚ್ಚು ವಾಹನಗಳು ಆಹಾರ ಪದಾರ್ಥಗಳನ್ನು ಹೊತ್ತು ಸಾಗಿದವು.

ಪಾರ್ಕಿಂಗ್‌ನಲ್ಲಿ ಉಗ್ರಾಣ: ಈ ಬಾರಿ ಹೊರೆಕಾಣಿಕೆ ಸಂಗ್ರಹಕ್ಕೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಉಗ್ರಾಣ ಮಾಡಲಾಗಿದ್ದು, ವಾಹನಗಳು ಉಗ್ರಾಣದತ್ತ ಬರುತ್ತಿದ್ದಂತೆಸ್ಕೌಟ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ತಂಡ ಹೊರೆಕಾಣಿಕೆಯನ್ನು ಉಗ್ರಾಣದೊಳಗೆ ಸಾಗಿಸಿತು.

ಮಲ್ಪೆ ಹೊರೆ ಕಾಣಿಕೆ ಸಮರ್ಪಣೆ ವೇಳೆ ಡಾ.ಜಿ.ಶಂಕರ್, ಉಸ್ತುವಾರಿ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಉದ್ಯಮಿ ಆನಂದ ಸಿ. ಕುಂದರ್, ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಸತೀಶ್ ಕುಂದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.