ADVERTISEMENT

ಉಡುಪಿ: ಜಿಲ್ಲೆಯ ರೈತರ ಕೈ ಹಿಡಿಯದ ‘ಕೃಷಿ ಯಂತ್ರಧಾರೆ’

ಬಡ ರೈತರಿಗೆ ಬಾಡಿಗೆಗೆ ಸಿಗದ ಭತ್ತದ ನಾಟಿ, ಕಟಾವು ಯಂತ್ರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:50 IST
Last Updated 20 ಜೂನ್ 2024, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಬಡ ರೈತರಿಗೆ ಅನುಕೂಲವಾಗಲೆಂದು ಆರಂಭಿಸಿರುವ ‘ಕೃಷಿ ಯಂತ್ರಧಾರೆ’ ಯೋಜನೆಯಿಂದ ಜಿಲ್ಲೆಯ ಕೃಷಿಕರಿಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲು ಜಿಲ್ಲೆಯ 9 ಹೋಬಳಿಗಳಲ್ಲಿ ಆರಂಭಿಸಿದ್ದ ಕೇಂದ್ರಗಳಲ್ಲಿ 7 ಕೇಂದ್ರಗಳು ಬಾಗಿಲು ಮುಚ್ಚಿದ್ದು, ಉಡುಪಿ ಮತ್ತು ವಂಡ್ಸೆಯಲ್ಲಿರುವ ಕೇಂದ್ರಗಳಷ್ಟೇ ಕಾರ್ಯಾಚರಿಸುತ್ತಿವೆ. ಈ ಕೇಂದ್ರಗಳ ಟೆಂಡರ್‌ ಅವಧಿ ಮುಗಿದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ವಿವರಣೆ.

ತೈಲ ದರ, ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಸರ್ಕಾರ ನಿಗದಿ ಪಡಿಸಿರುವ ಬಾಡಿಗೆಗೆ ಯಂತ್ರೋಪಕರಣ ನೀಡಲು ಸಾಧ್ಯವಾಗದೆ ಈ ಕೇಂದ್ರಗಳು ಬಾಗಿಲು ಮುಚ್ಚಿವೆ ಎಂದೂ ಹೇಳಲಾಗುತ್ತಿದೆ. ಇಲ್ಲಿರುವ ಯಂತ್ರೋಪಕರಣಗಳು ತುಕ್ಕು ಹಿಡಿದು ನಾಶವಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ADVERTISEMENT

ಭತ್ತದ ಕೃಷಿಯಲ್ಲಿ ಮುಖ್ಯವಾಗಿ ನಾಟಿ ಮಾಡುವ ಯಂತ್ರ, ಕಟಾವು ಮಾಡುವ ಯಂತ್ರಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ಮುಚ್ಚಿರುವುದರಿಂದ ರೈತರಿಗೆ ಉಪಕಾರವಿಲ್ಲದಂತಾಗಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ಸಮಸ್ಯೆ ಹೋಗಲಾಡಿಸಲು ಯಂತ್ರೋಪಕರಣಗಳನ್ನು ಬಳಸುವ ನಿಟ್ಟಿನಲ್ಲಿ, ಬಡ ರೈತರಿಗೆ ನೆರವಾಗಲು 2014ರಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುವುದು, ಕಡಿಮೆ ಉತ್ಪಾದನಾ ವೆಚ್ಚ, ದುಬಾರಿ ಯಂತ್ರೋಪಕರಣಗಳನ್ನು ಖರೀದಿಸುವ ಹೊರೆ ರೈತರ ಮೇಲೆ ಬೀಳದಂತೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.

ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಭತ್ತದ ನಾಟಿ, ಕಟಾವಿಗೆ ಯಂತ್ರೋಪಕರಣಗಳನ್ನು ಬಳಸಿದರೆ ರೈತರಿಗೂ ಅನುಕೂಲವಾಗಲಿದೆ. ಆದರೆ ಈ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ರೈತರು ದೂರುತ್ತಾರೆ.

ಜಿಲ್ಲೆಯಲ್ಲಿ ‘ಕೃಷಿ ಯಂತ್ರಧಾರೆ’ ಕೇಂದ್ರಗಳ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಇತರ ಸಂಸ್ಥೆಗಳಿಗೆ ನೀಡಲಾಗಿತ್ತು. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಎರಡು ಕೇಂದ್ರಗಳನ್ನು ಈಝಿ ಲೈಫ್‌ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.

ಟೆಂಡರ್‌ ಅವಧಿ ಮುಗಿದ ಬಳಿಕ ನಿರ್ವಹಣೆಯನ್ನು ಮುಂದುವರಿಸಲು ಕೆಲವು ಸಂಸ್ಥೆಗಳು ನಿರಾಸಕ್ತಿ ತೋರಿಸಿದವು ಅದರಿಂದಾಗಿ ಕೇಂದ್ರಗಳನ್ನು ಮುಚ್ಚಬೇಕಾಯಿತು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂಜಾ ಎಂ.ಎನ್‌. ತಿಳಿಸಿದರು. ಬೇರೆ ಸಂಸ್ಥೆಗಳು ಈ ‘ಕೃಷಿ ಯಂತ್ರಧಾರೆ’ ಕೇಂದ್ರಗಳ ನಿರ್ವಹಣೆಗೆ ಮುಂದೆ ಬಂದರೆ ಮತ್ತೆ ಆರಂಭವಾಗಬಹುದು ಎಂದೂ ವಿವರಿಸಿದರು.

‘ಕೃಷಿ ಯಂತ್ರಧಾರೆ’ ಕೇಂದ್ರಗಳ ನಿರ್ವಹಣೆಯ ಹೊಣೆಯನ್ನು ಕೃಷಿ ಪತ್ತಿನ ಸಹಕಾರ ಸಂಘಗಳು, ಸೊಸೈಟಿಗಳಿಗೆ ನೀಡಬೇಕು. ಅದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಸತ್ಯನಾರಾಯಣ ಉಡುಪ.

‘ಕೃಷಿ ಯಂತ್ರಧಾರೆ’ ಕೇಂದ್ರಗಳಲ್ಲಿ ಕೃಷಿ ಯಂತ್ರೋಪಕರಣಗಳು ಬಾಡಿಗೆಗೆ ಸಿಗುತ್ತಿದ್ದಾಗ ಖಾಸಗಿಯವರ ಬಾಡಿಗೆ ದರಕ್ಕೂ ನಿಯಂತ್ರಣವಿತ್ತು. ಈಗ ಅವರು ಹೇಳಿದ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಇದೆ ಎಂದೂ ಅವರು ಹೇಳುತ್ತಾರೆ.

ಹೊಸ ಕೃಷಿ ಯಂತ್ರೋಪಕರಣ ಖರೀದಿಸಲು ಸರ್ಕಾರ ಹಣ ನೀಡುತ್ತಿಲ್ಲ. ಹಳೆಯ ಯಂತ್ರೋಪಕರಣಗಳ ದುರಸ್ತಿ ದುಸ್ತರವಾಗಿದೆ. ಹಲವು ಯಂತ್ರೋಪಕರಣಗಳು ತುಕ್ಕು ಹಿಡಿದು ಹೋಗಿವೆ. ಈ ಕಾರಣಕ್ಕೆ ಯಾವುದೇ ಸಂಸ್ಥೆ ಈ ಕೇಂದ್ರಗಳ ನಿರ್ವಹಣೆಗೆ ಮುಂದೆ ಬರುತ್ತಿಲ್ಲ ಎಂದೂ ವಿವರಿಸಿದರು.

ಜಿಲ್ಲೆಯಲ್ಲಿ ಸದ್ಯ ‘ಕೃಷಿ ಯಂತ್ರಧಾರೆ’ ಯೋಜನೆಯ ಎರಡು ಕೇಂದ್ರಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಬಾಗಿಲು ಮುಚ್ಚಿರುವ ಕೇಂದ್ರಗಳಲ್ಲಿರುವ ಕೃಷಿ ಯಂತ್ರೋಪಕರಣಗಳಲ್ಲಿ ಕೆಲವನ್ನು ಬೇರೆ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ. ಇನ್ನುಳಿದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
–ಪೂಜಾ ಎಂ.ಎನ್‌., ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ
‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ಮತ್ತೆ ಆರಂಭಿಸಬೇಕೆಂದು ನಾವು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದೆವು. ಆದರೆ ಈ ಕೇಂದ್ರಗಳ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ.
–ಬಿ.ಸತ್ಯನಾರಾಯಣ ಉಡುಪ, ಪ್ರಧಾನ ಕಾರ್ಯದರ್ಶಿ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.