ಉಡುಪಿ: ‘ಗೀತೆಯನ್ನು ಬಿಟ್ಟು ಯೋಗ ಇಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡಕ್ಕೂ ಶ್ರೀಕೃಷ್ಣನು ಗೀತೆಯಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಿದ್ದಾನೆ. ಅದರಂತೆ ನಾವು ಗೀತೆಯ ತತ್ವಗಳನ್ನು ಜಗತ್ತಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದರೆ ಬಾಬಾ ರಾಮದೇವ್ ಅವರು ಯೋಗ ಸೂತ್ರಗಳನ್ನು ಪ್ರಚುರಪಡಿಸುತ್ತಿದ್ದಾರೆ. ಆ ನೆಲೆಯಲ್ಲಿ ಈ ಯೋಗ ಕಾರ್ಯಕ್ರಮ ಗೀತಾ ಯೋಗ ಸಂಗಮವಾಗಿದೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮದೇವ್ ಅವರು ಪಾಲಿಸುತ್ತಿದ್ದಾರೆ ಎಂದರು.
ಬಾಬಾ ರಾಮದೇವ್ ಮಾತನಾಡಿ, ‘ಪತಂಜಲಿ ಯೋಗ ಪೀಠದ ಮೂಲಕ ನಿತ್ಯ ದೇಶ ಮತ್ತು ಹೊರದೇಶಗಳಲ್ಲಿ 5 ಕೋಟಿ ಜನ ಯೋಗಾಭ್ಯಾಸ ಪ್ರಾಣಾಯಾಮ ನಡೆಸುತ್ತಿದ್ದಾರೆ’ ಎಂದರು.
ಆಧುನಿಕ ಜಗತ್ತಿನಲ್ಲಿ ಮನುಷ್ಯನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಯೋಗವೊಂದೇ ಪರಿಹಾರ ಎಂದು ಜಗತ್ತಿಗೆ ಅರ್ಥವಾಗುತ್ತಿದೆ. ಜೀವನ ಕ್ರಮಗಳಿಂದ ನಮ್ಮ ಶರೀರದಲ್ಲಿ ವ್ಯಯವಾಗುತ್ತಿರುವ ಧನಾತ್ಮಕ ಶಕ್ತಿಗಳನ್ನು ಪುನರುಜ್ಜೀವನಗೊಳಿಸಲು ಆಧುನಿಕ ವೈದ್ಯ ಶಾಸ್ತ್ರದಲ್ಲಿ ಉಪಾಯಗಳಿಲ್ಲ. ಅಲ್ಲಿ ಕೇವಲ ರಾಸಾಯನಿಕ ಔಷಧಿಗಳನ್ನು ಕೊಡುತ್ತಾರೆ. ಅದರಿಂದ ಮತ್ತಷ್ಟು ಋಣಾತ್ಮಕ ಪರಿಣಾಮಗಳಾಗುತ್ತಿವೆ. ಆದರೆ, ಯೋಗದಿಂದ ಶರೀರದಲ್ಲಿ ವ್ಯಯವಾದ ಶಕ್ತಿಯನ್ನು ಮತ್ತೆ ಉತ್ಪಾದಿಸಲು ಸಾಧ್ಯವಿದೆ ಎಂದರು.
ಜಗದ್ಗುರು ಮಧ್ವಾಚಾರ್ಯರಂಥ ನಮ್ಮ ಪೂರ್ವಜರು ಜೀವನದಲ್ಲಿ ಯೋಗಸೂತ್ರಗಳನ್ನು ಅಳವಡಿಸಿಕೊಂಡೇ ಮಹಾಪುರುಷರಾದರು. ಅಂಥ ಮಹಾತ್ಮರು ಹಾಕಿಕೊಟ್ಟ ಸತ್ಪರಂಪರೆಯಿಂದ ಇವತ್ತು ಸುಖೀ ಸ್ವಸ್ಥ ಸುಶಿಕ್ಷಿತ ಸಮಾಜ ನಿರ್ಮಾಣದ ಕಾರ್ಯಗಳಾಗುತ್ತಿರುವುದನ್ನು ಸಮಾಜ ಗಮನಿಸಬೇಕು ಎಂದು ಹೇಳಿದರು.
ಸ್ವಾಮಿ ಪರಮಾರ್ಥ ಜೀ, ಭವರ್ ಲಾಲ್ ಆರ್ಯ, ಮಠದ ದಿವಾನರಾದ ನಾಗರಾಜಾಚಾರ್ಯ, ಪ್ರಸನ್ನಾಚಾರ್ಯ, ವೇಂಕಟೇಶ ಮೆಹಂದಳೆ, ರಾಘವೇಂದ್ರ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.