ಉಡುಪಿ: ‘ಕಾರ್ಕಳದ ಅಜೆಕಾರಿನಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನ ನಡೆದಿದೆ’ ಎಂದು ಕೊಲೆಯಾದ ಬಾಲಕೃಷ್ಣ ಪೂಜಾರಿ ಅವರ ತಮ್ಮ ಪ್ರಕಾಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆರೋಪಿ ದಿಲೀಪ್ ಹೆಗ್ಡೆಯ ತಂದೆ ತಮ್ಮ ಹೇಳಿಕೆಗಳು ಹಾಗೂ ಹಣದ ಪ್ರಭಾವ ಬಳಸಿ ಪ್ರಕರಣದ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಆರೋಪಿ ದಿಲೀಪ್ ರಕ್ಷಣೆಗೆ ಪೊಲೀಸ್ ಇಲಾಖೆಯ ಮೇಲೆ ಅನೇಕರು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ಆರೋಪಿ ಪ್ರತಿಮಾ ಅವರ ಮನೆಯವರಿಗೂ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದರು.
ತನಿಖೆಯು ದಾರಿ ತಪ್ಪಿದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ. ಈಗಾಗಲೇ ಅನೇಕ ಸಂಘಟನೆಗಳು ನಮಗೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಬಾಲಕೃಷ್ಣ ಅವರಿಗೆ ಮೂರು ತಿಂಗಳಿನಿಂದ ವಿಷ ನೀಡಿದ್ದರು ಎಂಬ ಮಾಹಿತಿ ಇದೆ. ಅನಾರೋಗ್ಯಕ್ಕೆ ಒಳಗಾದ ಬಾಲಕೃಷ್ಣ ಅವರಿಗೆ ಚಿಕಿತ್ಸೆ ನೀಡಿದ್ದ ವಿವಿಧ ಆಸ್ಪತ್ರೆಗಳ ವೈದ್ಯರ ಗಮನಕ್ಕೆ ಈ ವಿಚಾರ ಯಾಕೆ ಬಂದಿಲ್ಲ? ವೈದ್ಯರ ಜೊತೆ ಮಾತನಾಡಲು ಪ್ರತಿಮಾ ನಮಗೆ ಅವಕಾಶ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಆರೋಪಿ ಪ್ರತಿಮಾಳ ಸಹೋದರ ಸಂದೀಪ್ ಮಾತನಾಡಿ, ಬಾಲಕೃಷ್ಣ ಅವರ ನಿಧನದ ಬಳಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ಸಂಬಂಧಿಕರಿಗಾಗಿ ಕಾಯುತ್ತಿದ್ದಾಗ, ಮೃತದೇಹವನ್ನು ಗಮನಿಸಿದೆ. ಗಾಯದ ಗುರುತುಗಳು ಕಾಣಿಸಿದ್ದವು. ಈ ಕಾರಣಕ್ಕೆ ಮರಣೋತ್ತರ ಪರೀಕ್ಷೆ ನಡೆಸಲು ಒತ್ತಾಯ ಮಾಡಿದ್ದೇನೆ. ಬಳಿಕ, ಪ್ರತಿಮಾ ನೈಜ ಸಂಗತಿ ಬಾಯಿಬಿಟ್ಟಿದ್ದಾಳೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಾಲಕೃಷ್ಣ ಪೂಜಾರಿ ಅವರ ತಂದೆ ಸಂಜೀವ ಪೂಜಾರಿ, ತಾರನಾಥ್ ಕೋಟ್ಯಾನ್, ಶಶಿರೇಖಾ ಇದ್ದರು. ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕೆಂದು ಆಗ್ರಹಿಸಿ ಕುಟುಂಬ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದರು.
‘ನನ್ನ ಆರೋಗ್ಯದಲ್ಲೂ ಏರುಪೇರು’
ನನ್ನ ಆರೋಗ್ಯವೂ ಕೆಲವು ತಿಂಗಳುಗಳಿಂದ ಏರುಪೇರಾಗುತ್ತಿದೆ. ಸ್ನಾಯು ಸೆಳೆತ ಕುತ್ತಿಗೆ ಭಾಗದಲ್ಲಿ ನೋವು ಆಗಾಗ ಕಾಣಿಸಿಕೊಳ್ಳುತ್ತಿದೆ. ಪ್ರತಿಮಾಳ ಮನೆಯಲ್ಲಿ ಒಂದೆರೆಡು ಬಾರಿ ಊಟ ಮಾಡಿದ್ದೆ ನನಗೂ ವಿಷವುನಿಸಿರುವ ಬಗ್ಗೆ ಅನುಮಾನವಿದ್ದು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವೆ ಎಂದು ಸಂದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.