ಉಡುಪಿ: ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಮಹನೀಯರಾದ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ. ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ ಸೇವೆಯು ಎಲ್ಲರಿಗೂ ಮಾದರಿ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಸಿದ್ಧರಾಮೇಶ್ವರ, ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಹಾಗೂ ದಾಸೋಹ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹನೀಯರು ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಸಾಧಕರ ಜೀವನ ಚರಿತ್ರೆಯ ಬಗ್ಗೆ ಅರಿವಿರಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣನಾಥ ಎಕ್ಕಾರು, ‘ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವಾಗಿದ್ದು, ಶರಣರು ಮತ್ತು ಮಹನೀಯರು 800 ವರ್ಷಕ್ಕೂ ಈ ಅಂಶಗಳನ್ನು ತಿಳಿಸಿದ್ದರು. ವಿಶ್ವ ಮಾನವ ತತ್ವದ ಪ್ರತಿಪಾದಿಸಿದ್ದರು ಎಂದರು.
ಅಂಬಿಗರ ಚೌಡಯ್ಯ ಸಮಾಜದಲ್ಲಿನ ಅಸಮಾನತೆ ಬಗ್ಗೆ ನೇರ, ದಿಟ್ಟವಾಗಿ ನುಡಿದಿದ್ದರು. ಅವರ ಸಂದೇಶಗಳಲ್ಲಿ ವಾಸ್ತವಿಕತೆ, ವೈಚಾರಿಕತೆ, ಜ್ಞಾನ ಎಲ್ಲವೂ ಅಡಗಿದ್ದು, ಅಂತರಂಗ ಶುದ್ಧತೆಯೇ ನಿಜವಾದ ಮಾನವ ಧರ್ಮ ಎಂದು ಜಗತ್ತಿಗೆ ಸಾರಿದವರು ಎಂದರು.
ಶಿವಯೋಗಿ ಸಿದ್ದರಾಮೇಶ್ವರರು ಸಮಾಜವೇವೆಯನ್ನು ಕಾಯಕವನ್ನಾಗಿ ಮಾಡಿಕೊಂಡು ಜನಸಾಮಾನ್ಯರಿಗೆ ನಾಡಿನಾದ್ಯಂತ ಕೆರೆ, ಕಟ್ಟೆ, ಬಾವಿಗಳನ್ನು ನಿರ್ಮಿಸಿದರು. ಶರಣ ಪರಂಪರೆಯಲ್ಲಿ ಮಾನವ ಸೇವೆಯ ಮೂಲಕ ಸಮಾಜಸೇವೆಯನ್ನು ಕಂಡವರು ಎಂದರು.
ಮಹಾಯೋಗಿ ವೇಮನನು ಕವಿ, ಯೋಗಿ, ತತ್ವಜ್ಞಾನಿ, ದಾರ್ಶನಿಕರಾಗಿದ್ದು, ಸುಸಂಸ್ಕೃತ ಬದುಕಿನ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿ, ಶ್ರೀಗಳು ಲಕ್ಷಾಂತರ ಮಂದಿಗೆ ಉಚಿತ ಶಿಕ್ಷಣ, ವಸತಿ, ಆಹಾರ ಒದಗಿಸುವ ಮೂಲಕ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಹಬ್ಬಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ ವಂದಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.