ಉಡುಪಿ: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆನಂದ ಪುತ್ರನ್ ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯಿಂದ ಆದರ್ಶ ಪ್ರಾಯರಾಗಿದ್ದರು ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಹೇಳಿದರು.
ನಗರದ ಪುರಭವನದಲ್ಲಿ ಆಯೋಜಿಸಿದ್ದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಆನಂದ ಪುತ್ರನ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಆನಂದ ಪುತ್ರನ್ ನಾಯಕತ್ವದ ಗುಣಗಳಿಂದ ಮೀನುಗಾರ ಸಮುದಾಯದ ಮುಂದಾಳುವಾಗಿದ್ದರು. ಅವರ ನಿಧನದಿಂದ ಮೊಗವೀರ ಸಮಾಜಕ್ಕೆ ನಷ್ಟವಾಗಿದೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾತನಾಡಿ ಮಹಾಲಕ್ಷ್ಮೀ ಬ್ಯಾಂಕ್ ಮೂಲಕ ಸಾವಿರಾರು ಮೀನುಗಾರರಿಗೆ ಸಾಲ ಸೌಲಭ್ಯ ನೀಡಿ ಆರ್ಥಿಕ ಚೈತನ್ಯ ತುಂಬುವಲ್ಲಿ ಆನಂದ್ ಪುತ್ರನ್ ಶ್ರಮಿಸಿದ್ದರು ಎಂದರು.
ಧಾರ್ಮಿಕ ಮುಂದಾಳು ವಾಸದೇವ ಭಟ್ ಪೆರಂಪಳ್ಳಿ ಮಾತನಾಡಿ, ಅಷ್ಟ ಮಠಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಿಂದೂತ್ವದ ವಿಚಾರದಲ್ಲಿ ದಿಟ್ಟ ನಿಲುವು ಹೊಂದಿದ್ದರು. ಪುತ್ರ ಯಶ್‍ಪಾಲ್ ಸುವರ್ಣಗೂ ಪ್ರೇರಣೆಯಾಗಿದ್ದರು ಎಂದರು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಎಸ್.ಕೆ.ಮಂಜುನಾಥ ಮಾತನಾಡಿ ‘ಸುದೀರ್ಘ 32 ವರ್ಷ ಬ್ಯಾಂಕಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದರು ಎಂದರು.
ಸಮಾರಂಭದಲ್ಲಿ ಉದ್ಯಮಿ ಡಾ.ಜಿ.ಶಂಕರ್, ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಉದ್ಯಮಿ ಆನಂದ ಸಿ. ಕುಂದರ್, ಆನಂದ ಪಿ. ಸುವರ್ಣ, ಭುವನೇಂದ್ರ ಕಿದಿಯೂರು, ಜೆರಿ ವಿನ್ಸೆಂಟ್ ಡಯಾಸ್, ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ. ಎಸ್. ಚಂದ್ರಶೇಖರ್, ಆರ್‌ಎಸ್‌ಎಸ್ ಪ್ರಮುಖರಾದ ನಾರಾಯಣ ಶೆಣೈ, ಮುಖಂಡರಾದ ಸುರೇಶ್ ನಾಯಕ್ ಕುಯಿಲಾಡಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.