ಉಡುಪಿ: ಅಷ್ಠಮಠಗಳಲ್ಲಿ ಒಂದಾಗಿರುವ ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯನ್ನಾಗಿ ಅನಿರುದ್ಧ ಸರಳತ್ತಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಿಸಿದರು.
ಬುಧವಾರ ಹಿರಿಯಡ್ಕ ಸಮೀಪದ ಶೀರೂರು ಮೂಲಮಠದಲ್ಲಿ ಮಾತನಾಡಿದ ಶ್ರೀಗಳು, ಧರ್ಮಸ್ಥಳದ ನಿಡ್ಲೆಯ ಎಂ.ಉದಯಕುಮಾರ್ ಸರಳತ್ತಾಯ ಹಾಗೂ ಶ್ರೀವಿದ್ಯಾ ದಂಪತಿಯ 16 ವರ್ಷದ ಪುತ್ರ ಅನಿರುದ್ಧ ಸರಳತ್ತಾಯ ಶೀರೂರು ಮಠದ ಪರಂಪರೆಯ 31ನೇ ಯತಿಗಳಾಗಲಿದ್ದಾರೆ ಎಂದರು.
ಮೇ 13ರಂದು ಬೆಳಿಗ್ಗೆ 7.35 ಹಾಗೂ 8 ಗಂಟೆಯ ನಡುವಿನ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ನಡೆಯಲಿದ್ದು, 14ರಂದು ಮಧ್ಯಾಹ್ನ 12.35 ಹಾಗೂ 12.50ರ ನಡುವಿನ ಅಭಿಜಿನ್ ಮುಹೂರ್ತದಲ್ಲಿ ಪಟ್ಟಾಭಿಷೇಕ ನಡೆಯಲಿದೆ ಎಂದು ಮಾಹಿತಿ ನೀಡಿದರು.
2 ವರ್ಷಗಳಿಂದ ಶೀರೂರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿಯ ಆಯ್ಕೆ ಕಸರತ್ತು ನಡೆದಿತ್ತು. ಅನಿರುದ್ಧ ಸರಳತ್ತಾಯರ ಜಾತಕದಲ್ಲಿ ಸನ್ಯಾಸಿ ಹಾಗೂ ಪೀಠಾಧಿಪತಿಯಾಗುವ ಯೋಗವಿರುವುದರಿಂದ ಅವರನ್ನು ಆಯ್ಕೆ ಮಾಡಲಾಯಿತು. ಎಸ್ಸೆಸ್ಸೆಲ್ಸಿಯವರೆಗೂ ಲೌಕಿಕ ಶಿಕ್ಷಣ ಪಡೆದಿರುವ ನಿಯೋಜಿತ ಯತಿ ಶಿರಸಿಯ ಸೋಂದಾ ಕ್ಷೇತ್ರದಲ್ಲಿ ವೇದಾಧ್ಯಯನದಲ್ಲಿ ತೊಡಗಲಿದ್ದಾರೆ ಎಂದರು.
ಜುಲೈ 19, 2018ರಂದು ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶರಾಗಿದ್ದರು. 2 ವರ್ಷ 9 ತಿಂಗಳು ಪೀಠ ಖಾಲಿ ಉಳಿದಿತ್ತು. ಮತ್ತೊಂದೆಡೆ, ಶೀರೂರು ಮಠದ ಆಡಳಿತದಲ್ಲಿ ಪಾರದರ್ಶಕತೆ ಇಲ್ಲದಿರುವ ವಿಚಾರ ನ್ಯಾಯಾಲಯದಲ್ಲಿದ್ದು, ನೂತನ ಉತ್ತರಾಧಿಕಾರಿ ನೇಮಕ ಮಾಡುವಂತಿಲ್ಲ. ಮಾಡಿದರೆ ಕಾನೂನು ಹೋರಾಟ ಮಾಡುವುದಾಗಿ ಲಕ್ಷ್ಮೀವರ ತೀರ್ಥ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.