ಉಡುಪಿ: ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಅವರಿಗೆ ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಂಘದಲ್ಲಿ ಮನವಿ ಸಲ್ಲಿಸಲಾಯಿತು.
ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ನೀಡಲು ಬಿಪಿಎಲ್ ಕಾರ್ಡ್ ಪರಿಗಣನೆ ಮಾಡದ ಬಗ್ಗೆ ಕ್ರಮ ಜರುಗಿಸಬೇಕು, ಬೋಟ್‌ಗಳಿಗೆ ರೋಡ್ ಸೆಸ್ ವಿಧಿಸುವುದನ್ನು ಕೈಬಿಡಬೇಕು, ಅಂತರರಾಜ್ಯ ಸಮನ್ವಯ ಸಮಿತಿ ರಚನೆ ಮಾಡಬೇಕು, ಅನಿಯಮಿತ ಸೀಮೆಎಣ್ಣೆ ಸರಬರಾಜು ಮಾಡಬೇಕು, ಮಲ್ಪೆಯಲ್ಲಿ ಹೊರ ಬಂದರು ನಿರ್ಮಾಣ ಮಾಡಬೇಕು, ಈಗಿರುವ ಬಂದರನ್ನು ಮೇಲ್ದರ್ಜೆಗೇರಿಸಬೇಕು, ಮೀನುಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿ ಕೈಗಾರಿಕಾ ವಲಯ ಆರಂಭಿಸಬೇಕು, ಹಳೆಯ ಬೋಟುಗಳ ಪುನರ್ ನಿರ್ಮಾಣಕ್ಕೆ ಸಹಾಯಧನ ನೀಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಕೇಂದ್ರ ಸಚಿವರಿಗೆ ಸಲ್ಲಿಸಿದರು.
ಹಿರಿಯ ಮೀನುಗಾರರಿಗೆ ಪಿಂಚಣಿ ನೀಡಬೇಕು, ನಾಡ ದೋಣಿ ಮೀನುಗಾರರಿಗೆ ಪರ್ಯಯ ಇಂಧನ ಒದಗಿಸುಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ.ಸುವರ್ಣ ಮನವಿ ಸಲ್ಲಿಸಿದರು.
ಮೀನುಗಾರರ ಮನವಿಗಳ ಬಗ್ಗೆ ಪರಿಶೀಲಿಸಿ ಗರಿಷ್ಠ ಪ್ರಯೋಜನ ಒದಗಿಸಲಾಗುವುದು. ಪ್ರಸ್ತುತ ಇರುವ ಯೋಜನೆಗಳಲ್ಲಿ ಅಗತ್ಯ ಬದಲಾವಣೆ ಮಾಡುವ ಮುಲಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಮೀನುಗಾರ ಮುಖಂಡರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.