ADVERTISEMENT

ಸಂಘಟನೆ ಕಟ್ಟಿ ಸಂವಿಧಾನದ ಆಶಯ ಈಡೇರಿಸಿ: ಸುಂದರ ಮಾಸ್ತರ್

ಆರೂರಿನಲ್ಲಿ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಸುಂದರ ಮಾಸ್ತರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:04 IST
Last Updated 19 ನವೆಂಬರ್ 2024, 16:04 IST
ಆರೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟನೆಗೊಂಡಿತು
ಆರೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟನೆಗೊಂಡಿತು   

ಆರೂರು (ಬ್ರಹ್ಮಾವರ): ಹಳ್ಳಿ ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಕರೆ ನೀಡಿದರು.

ಬ್ರಹ್ಮಾವರ ತಾಲ್ಲೂಕಿನ ಆರೂರಿನಲ್ಲಿ ದಲಿತ ಸಂಘರ್ಷ ಸಮಿತಿಯ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಖೆ ಉದ್ಘಾಟಿಸಿ ಮಾತನಾಡಿದ ದ.ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಪ್ರೊ.ಕೃಷ್ಣಪ್ಪ ಅವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯ ಮೂಲೆ ಮೂಲೆಗೂ ವಿಸ್ತರಿಸುವ ಕೆಲಸ ನಾವು ಮಾಡಬೇಕು. ಈ ಸಂಘಟನೆ ಮೂಲಕ ಜನರ ಸೇವೆ ಮಾಡುವ ಅವಕಾಶ ನಮಗೆ ಸಿಕ್ಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಪ್ರಯೋಜನ ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.

ADVERTISEMENT

ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಇರುವ ಏಕೈಕ ಸಂಘಟನೆ ಅಂಬೇಡ್ಕರ್ ವಾದ. ನಾವೆಲ್ಲರೂ ಅಂಬೇಡ್ಕರ್ ಋಣ ತೀರಿಸಲು ಬಂದಿದ್ದೇವೆ. ಹೊಟ್ಟೆ ಪಾಡಿಗೆ ನಮಗೆ ಒಳ್ಳೆಯ ಉದ್ಯೋಗ ಇದೆ. ಆದರೆ ಧ್ವನಿ ಇಲ್ಲದ ನಮ್ಮ ಶೋಷಿತ ಸಮುದಾಯದವರಿಗೆ ಧ್ವನಿಯಾಗಲು ಪ್ರತಿ ಹಳ್ಳಿಯಲ್ಲೂ ದ.ಸಂ.ಸ. ಶಾಖೆ ತೆರೆಯುತ್ತಿದ್ದೇವೆ ಎಂದರು.

ಬ್ರಹ್ಮಾವರ ಪೋಲೀಸ್ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಶಾಂತರಾಜ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಆರೂರು ಬಬ್ಬುಸ್ವಾಮಿ ದೇವಸ್ಥಾನದ ಮೊಕ್ತೇಸರ ಅರುಣ ಕುಮಾರ್ ಶೆಟ್ಟಿ, ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ರಾವ್, ಸದಸ್ಯೆ ಪಾರ್ವತಿ, ಮಾಜಿ ಅಧ್ಯಕ್ಷ ರಾಜೀವ ಕುಲಾಲ, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ರಾಜೇಂದ್ರ ನಾಥ್, ಮಂಜುನಾಥ ಹಳಗೇರಿ, ತಾಲ್ಲೂಕು ಪದಾಧಿಕಾರಿಗಳಾದ ಶಂಕರ್ ದಾಸ್ ಚೆಂಡ್ಕಳ, ವಡ್ಡರ್ಸೆ ಶ್ರೀನಿವಾಸ, ಶಿವಾನಂದ ಬಿರ್ತಿ, ಸುಧಾಕರ ಮಾಸ್ಟರ್ ಗುಜ್ಜರ್ ಬೆಟ್ಟು, ಹರೀಶ್ಚಂದ್ರ ಬಿರ್ತಿ ಇದ್ದರು.

ಹೊಸದಾಗಿ ಆಯ್ಕೆ ಆದ ಆರೂರು ಗ್ರಾಮ ಶಾಖೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.‌ ಪ್ರಧಾನ ಸಂಚಾಲಕರಾಗಿ ನರಸಿಂಹ ಆಯ್ಕೆಯಾದರು. ಭಾಸ್ಕರ ವಂದಿಸಿದರು. ಶರತ್ ಆರೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.