ಕಾರ್ಕಳ: ಚಂದ್ರಲೋಕದ ವಿಸ್ಮಯಗಳು ಬೆರಗು ಹುಟ್ಟಿಸುತ್ತವೆ ಎಂದು ಮೂಡುಬಿದಿರೆ ಮಹಾವೀರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಭಟ್ ಹೇಳಿದರು.
ಇಲ್ಲಿನ ಭುವನೇಂದ್ರ ಕಾಲೇಜಿನ ವಿಜ್ಞಾನ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಚಂದ್ರನ ಮೇಲೆ ನೀರು ಇರುವ ವಿಷಯ ಮೊದಲು ಕಂಡು ಹಿಡಿದ ಕೀರ್ತಿ ಭಾರತದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಚಂದ್ರನ ಮೇಲೆ ಉಪಗ್ರಹ ಇಳಿಸುವ ಯಶಸ್ಸಿನೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮುನ್ನಡೆ ಸಾಧಿಸಿದೆ ಎಂದರು.
ಚಂದ್ರನ ಮೇಲಿನ ವಾತಾವರಣ ತಿಳಿಯಲು ಅಮೆರಿಕ, ರಷ್ಯಾ ಸೇರಿದಂತೆ ಹಲವು ದೇಶಗಳು ಉಪಗ್ರಹ ಉಡ್ಡಯಿಸಿದ ಕಾರಣದಿಂದ ಚಂದ್ರನ ಬಗ್ಗೆ ಹಲವಾರು ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಆಕಾಶ ವೀಕ್ಷಣೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರೇರಣೆ. ಇಂತಹ ಚಟುವಟಿಕೆಗಳಿಂದ ವೈಜ್ಞಾನಿಕ ಚಿಂತನೆ ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.
ವಿಜ್ಞಾನ ಸಂಘದ ಸಂಯೋಜಕಿ ವಿಜಯ ಕುಮಾರಿ ಸ್ವಾಗತಿಸಿದರು. ಶ್ರೇಯಾ ಹೆಗ್ಡೆ ವಂದಿಸಿದರು. ಭೂಮಿಕಾ ಕಾಮತ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.