ADVERTISEMENT

ಉಡುಪಿ | ಮರಗಳಿಗೆ ಕೊಡಲಿ: ಗುತ್ತಿಗೆದಾರನಿಗೆ ₹25 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:30 IST
Last Updated 2 ಜುಲೈ 2024, 14:30 IST
ಉಡುಪಿಯ ಭುಜಂಗ ಪಾರ್ಕ್‌ನಲ್ಲಿ ಮರ ಕಡಿದಿರುವುದು
ಉಡುಪಿಯ ಭುಜಂಗ ಪಾರ್ಕ್‌ನಲ್ಲಿ ಮರ ಕಡಿದಿರುವುದು   

ಉಡುಪಿ: ನಗರದ ಭುಜಂಗ ಪಾರ್ಕ್‌ನಲ್ಲಿ ಅನುಮತಿ ಇಲ್ಲದೆ ಮರಗಳನ್ನು ಕಡಿದಿದ್ದಕ್ಕೆ ಗುತ್ತಿಗೆದಾರನಿಗೆ ನಗರಸಭೆ ಪೌರಾಯುಕ್ತರು ಮಂಗಳವಾರ ₹25 ಸಾವಿರ ದಂಡ ವಿಧಿಸಿದ್ದಾರೆ.

ಪಾರ್ಕ್‌ನಲ್ಲಿ ಮರ ಕಡಿಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮರಗಳು ಅಪಾಯಕಾರಿಯಾಗಿವೆ ಎಂಬ ಕಾರಣಕ್ಕೆ ಅವುಗಳನ್ನು ಕಡಿಯಲು ಗುತ್ತಿಗೆದಾರ ಸುರೇಶ್‌ ಸೂಚಿಸಿರುವುದಾಗಿ ಕಾರ್ಮಿಕರು ತಿಳಿಸಿದ್ದರು.

ಬಳಿಕ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೌರಾಯುಕ್ತ ರಾಯಪ್ಪ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು, ದಂಡ ವಿಧಿಸಿದರು.

ADVERTISEMENT

‘ಗಾಳಿ ಮಳೆಗೆ ಮರ ಬಿದ್ದು ಅಪಾಯವಾಗುವ ಸಾಧ್ಯತೆ ಇದೆ ಎಂದು ಯಾವುದೇ ಅನುಮತಿ ಪಡೆಯದೆ ಮರ ಕಡಿದಿದ್ದಾರೆ. ಗುತ್ತಿಗೆದಾರನಿಗೆ ದಂಡ ಹಾಕಿ, ಮರ ಕಡಿದ ಜಾಗದಲ್ಲಿ ಐದು ಸಸಿಗಳನ್ನು ನೆಡಿಸಿದ್ದೇನೆ’ ಎಂದು ಪೌರಾಯುಕ್ತ ರಾಯಪ್ಪ ಅವರು ತಿಳಿಸಿದ್ದಾರೆ.

ಪಾರ್ಕ್‌ನಲ್ಲಿರುವ ವೇದಿಕೆಯ ಸುತ್ತಲು ಮರಗಳಿದ್ದು, ಬಯಲು ರಂಗಮಂದಿರದಂತಾಗಿತ್ತು. ಈಗ ಮರಗಳನ್ನು ಕಡಿದು ನೆರಳೇ ಇಲ್ಲದಂತಾಗಿದೆ. ಪಾರ್ಕ್‌ನ ನಿರ್ವಹಣೆ ಸರಿ ಇಲ್ಲ. ಮಳೆ ಬರುವಾಗಲೂ ಸ್ಪ್ರಿಂಕ್ಲರ್‌ ಮೂಲಕ ಹುಲ್ಲುಗಳಿಗೆ ನೀರು ಬಿಡುತ್ತಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ನಗರಸಭೆಯ ಪರಿಸರ ಎಂಜಿನಿಯರ್‌ ಸ್ನೇಹಾ ಕೆ.ಎಸ್‌. ಜೊತೆಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮರ ಕಡಿದ ಜಾಗದಲ್ಲಿ ಸಸಿ ನೆಡಿಸಿದ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.