ADVERTISEMENT

ಬೈಂದೂರು: 27 ‘4ಜಿ’ ಟವರ್‌ ನಿರ್ಮಾಣ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2023, 16:38 IST
Last Updated 28 ಮೇ 2023, 16:38 IST
ಬಿ.ವೈ.ರಾಘವೇಂದ್ರ,ಸಂಸದ 
ಬಿ.ವೈ.ರಾಘವೇಂದ್ರ,ಸಂಸದ    

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರ ಸಂಪರ್ಕ ಸೌಲಭ್ಯ ವಂಚಿತ ಗ್ರಾಮಗಳನ್ನು ಗುರುತಿಸಿ ತುರ್ತು ದೂರಸಂಪರ್ಕ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದಲ್ಲಿ ಮೊಬೈಲ್ ನೆಟ್‌ವರ್ಕ್ ವಂಚಿತ ಪ್ರದೇಶಗಳನ್ನು ಗುರುತಿಸಿ ನೆಟ್‌ವರ್ಕ್ ಸೌಲಭ್ಯ ನೀಡುವ ಸಂಬಂಧ ಬಿಎಸ್‌ಎನ್‌ಎಲ್, ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿ ಮೂರು ಕಂಪೆನಿಗಳಿಗೆ ಸಮರ್ಪಕ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿತ್ತು.

ಕ್ಷೇತ್ರದ ಕೆಲವು ಕಡೆಗಳಲ್ಲಿ ಜಿಯೋ ಮತ್ತು ಏರ್‌ಟೆಲ್ ಮೊಬೈಲ್ ಟವರ್ ಸ್ಥಾಪಿಸಿದರೂ ಕೆಲವು ಕುಗ್ರಾಮಗಳಲ್ಲಿ ಜನವಸತಿ ಕಡಿಮೆ ಕಾರಣದಿಂದ ಖಾಸಗಿ ಕಂಪನಿಗಳು ಟವರ್ ನಿರ್ಮಾಣಕ್ಕೆ ಆಸಕ್ತಿ ತೋರಲಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದ 96 ಸ್ಥಳಗಳನ್ನು ಗುರುತಿಸಿ ಮೊಬೈಲ್ ಟವರ್ ನಿರ್ಮಾಣ ಮಾಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ಅಶ್ವಿನಿ ವೃಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ADVERTISEMENT

ಸತತ ಪ್ರಯತ್ನಕ್ಕೆ ಮನ್ನಣೆ ನೀಡಿದ ಸಚಿವರು ಶಿವಮೊಗ್ಗ ಟೆಲಿಕಾಂ ಜಿಲ್ಲೆಗೆ 4 ಜಿ ಸ್ಯಾಚುರೇಷನ್ ಯೋಜನೆಯಡಿ 198 ಹಾಗೂ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 27 ಹೊಸ 4ಜಿ ಟವರ್‌ಗಳಿಗೆ  ಮಂಜೂರಾತಿ ನೀಡಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಸಾಗರ 89, ಹೊಸನಗರ 35, ತೀರ್ಥಹಳ್ಳಿ 27, ಶಿವಮೊಗ್ಗ 18, ಶಿಕಾರಿಪುರ 13, ಭದ್ರಾವತಿ ಮತ್ತು ಸೊರಬ ತಾಲ್ಲೂಕಿನಲ್ಲಿ ತಲಾ 8 ಸ್ಥಳ ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ ಎಂದು ಮಾಹಿತಿ ನೀಡಿದರು.

ಈ ಪೈಕಿ ಮೊದಲ 3 ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 12 ಸ್ಥಳಗಳಲ್ಲಿ ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದ್ದು, ಸ್ಥಳಗಳ ಸರ್ವೆ ಕಾರ್ಯ ನಡೆದಿದ್ದು ಕಂದಾಯ ಇಲಾಖೆಯ ಭೂಮಿ ಹಸ್ತಾಂತರಕ್ಕೆ ಜಿಲ್ಲಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿಯ ಭೂಮಿ ಹಸ್ತಾಂತರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ತೆಗೆದುಕೊಳ್ಳಬೇಕು ಎಂದರು.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವತಿಯಿಂದ ಈಗಾಗಲೇ 8 ಸ್ಥಳಗಳನ್ನು ಹಸ್ತಾಂತರಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ 73 ಸ್ಥಳಗಳನ್ನು ಹಾಗೂ ಬೈಂದೂರು ಕ್ಷೇತ್ರದ ಕಂದಾಯ ಇಲಾಖೆಯ 23 ಸ್ಥಳಗಳನ್ನು ಕೂಡಲೇ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿ ಟವರ್ ನಿರ್ಮಾಣಕ್ಕೆ ₹75 ಲಕ್ಷದಿಂದ ₹1 ಕೋಟಿವರೆಗೂ ವೆಚ್ಚವಾಗಲಿದ್ದು 225 ಟವರ್ ನಿರ್ಮಾಣಕ್ಕೆ ₹200 ಕೋಟಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಮೊಬೈಲ್ ಟವರ್‌ಗಳ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್‌ನೊಳಗೆ ಮುಕ್ತಾಯವಾಗಲಿದೆ ಎಂದರು.

ಗ್ರಾಮೀಣ ಪ್ರದೇಶದ ಜನರಿಗೆ ಡಿಜಿಟಲ್ ಸಂಪರ್ಕ, ಡಿಜಿಟಲ್ ಸೇವೆ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ಜೀವನ ಮಟ್ಟ ಸುಧಾರಿಸಲು ಬ್ಲಾಕ್ ಸ್ಯಾಚುರೇಶನ್ ಯೋಜನೆ ದೇಶದ ನಾಲ್ಕು ವಲಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು ಕರ್ನಾಟಕದಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆಯ್ಕೆಯಾಗಿದೆ ಎಂದರು.

ಶಿವಮೊಗ್ಗ ಟೆಲಿಕಾಂ ಜಿಲ್ಲೆಯು ಅತ್ಯಧಿಕ ಸಂಖ್ಯೆಯ ವೈಫೈ ಸಂಪರ್ಕವನ್ನು ಒದಗಿಸಿದೆ. ಆನ್‌ಲೈನ್ ವಹಿವಾಟುಗಳಿಗಾಗಿ ಬ್ಯಾಂಕ್ ಸರ್ಕ್ಯೂಟ್‌ಗಳಿಗೆ ಸ್ಥಿರವಾದ ಸಂಪರ್ಕ ಒದಗಿಸುವ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದಡಿಯಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ ಎಂದರು.

ಸಭೆಯಲ್ಲಿ ಶಿವಮೊಗ್ಗ ವಲಯ ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿ ವೆಂಕಟೇಶ್, ಸಬ್ ಡಿವಿಜನಲ್ ಎಂಜಿನಿಯರ್‌ಗಳಾದ ರಾಜು, ಜಯಕುಮಾರ್, ಎನ್.ಬಿ.ಹೆಬ್ಬಾಳ್, ಜೆ.ಟಿ.ಒ ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.