ADVERTISEMENT

ಬೈಂದೂರು: ವಿದ್ಯಾರ್ಥಿಗಳನ್ನು ಗದ್ದೆಗಿಳಿಸಿ ಕೃಷಿ ಪಾಠ

ಯು.ಬಿ.ಶೆಟ್ಟಿ ಆಂಗ್ಲಮಾಧ್ಯಮ ಶಾಲೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:01 IST
Last Updated 27 ಜೂನ್ 2024, 5:01 IST
ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯ ಪಾಠ ಮಾಡಲಾಯಿತು
ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯ ಪಾಠ ಮಾಡಲಾಯಿತು   

ಬೈಂದೂರು: ಶಾಲೆಗಳಲ್ಲಿ ಪಾಠದ ಜತೆಗೆ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ ಬೈಂದೂರು ತಾಲ್ಲೂಕಿನ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಪಾಠ ಮಾಡಲಾಗಿದೆ.

ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ ಇತ್ತೀಚಿನ ಚಿಕ್ಕಮಕ್ಕಳಿಗೆ ವ್ಯವಸಾಯ ಎಂದರೆ ಏನು,  ಗದ್ದೆ ಎಂದರೆ ಹೇಗಿರುತ್ತದೆ, ನಾಟಿ ಹೇಗೆ ಮಾಡಬೇಕು ಮುಂತಾದ ಪ್ರಶ್ನೆಗಳಿಗೆ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು.

ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲು ಸಾಧ್ಯ ಎಂಬ ಆಶಯದೊಂದಿಗೆ ಬೈಂದೂರು ತಾಲ್ಲೂಕಿನ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು.

ADVERTISEMENT

102 ವರ್ಷ ವಯಸ್ಸಿನ ಕುಪ್ಪಯ್ಯ ಪೂಜಾರಿ ಅವರು ಶಾಲೆಯ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿಯವರಿಗೆ ಭತ್ತದ ಸಸಿ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷಿ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು, ಹಾಡಿನ ಮೂಲಕ ಕೃಷಿ ಬಗ್ಗೆ ಅರಿವನ್ನು ಮೂಡಿಸಿದರು.

ಮಕ್ಕಳು ಮಳೆಯನ್ನು ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡು ಗದ್ದೆಯಲ್ಲಿ ನಾಟಿ ಮಾಡಿ ಗಮನ ಸೆಳೆದರು. ಮಕ್ಕಳ ಉತ್ಸಾಹವನ್ನು ಕಂಡ ಪಾಲಕರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.

ಕೃಷಿಕರಾದ ಮಂಜುನಾಥ ಶೆಟ್ಟಿ, ರಾಘವೇಂದ್ರ, ಕೃಷ್ಣ ಪೂಜಾರಿ, ಗ್ರಾಮಸ್ಥರು, ತರಗತಿ ಶಿಕ್ಷಕರು, ದೈಹಿಕ ಶಿಕ್ಷಣ  ಶಿಕ್ಷಕರು, ಹಾಗೂ ಶಾಲಾ ಸಿಬ್ಬಂದಿ, ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.