ಉಡುಪಿ: ಮಹಾಲಕ್ಷ್ಮಿ ಕೊ ಆಪರೇಟಿವ್ ಬ್ಯಾಂಕ್‌ನ ಏಳಿಗೆಯನ್ನು ಸಹಿಸದೆ ಬ್ಯಾಂಕ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಅಂತಹವರ ವಿರುದ್ಧ ಕಾನೂನಿನ ಮೊರೆ ಹೋಗುತ್ತೇವೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಬ್ಯಾಂಕ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ಎಸ್‌ಐಟಿ, ಇ.ಡಿ., ಸಿಬಿಐ ಸೇರಿದಂತೆ ಯಾವುದೇ ತನಿಖೆಯಾಗಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದರು.
ಬ್ಯಾಂಕ್ ವಿರುದ್ಧ ಆಧಾರರಹಿತವಾಗಿ ಆರೋಪ ಮಾಡುವವರು ಅವರ ಗೌರವವನ್ನು ಕಳೆದುಕೊಂಡಿದ್ದಾರೆ. ಇದು ಸಹಕಾರಿ ರಂಗಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.
ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬ್ಯಾಂಕ್ ಸಿಬ್ಬಂದಿ ದೇವಾಲಯಕ್ಕೆ ಪ್ರಮಾಣಕ್ಕೆ ಕರೆದಿದ್ದರು. ಆದರೆ ಆ ವಿಚಾರವನ್ನು ತಿರುಚುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಮಧ್ಯವರ್ತಿಗಳಿಂದ ಅನ್ಯಾಯವಾಗಿದ್ದರೆ ಆ ವಿಚಾರವನ್ನು ನನಗೆ ತಿಳಿಸಬಹುದಿತ್ತು. ಅಥವಾ ಪೊಲೀಸರಿಗೆ ದೂರು ನೀಡಬಹುದಿತ್ತು. ಅದು ಬಿಟ್ಟು ನಮ್ಮ ಬ್ಯಾಂಕ್‌ನಲ್ಲಿ ಸಾಲಗಾರರಾಗಿರುವ ರಘುಪತಿ ಭಟ್ ಅವರಿಗೆ ಮನವಿ ಮಾಡುವ ಅಗತ್ಯವೇನಿತ್ತು. ರಘುಪತಿ ಭಟ್ ಪಡೆದಿರುವ ಸಾಲದ ಮೊತ್ತವನ್ನು ಒಂದು ವಾರದೊಳಗೆ ಪಾವತಿಸುವಂತೆ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
ಆರ್‌ಬಿಐ ಚೌಕಟ್ಟಿನಲ್ಲಿ ನಮ್ಮ ಬ್ಯಾಂಕ್‌ನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಆರ್‌ಬಿಐ ಅಂಗೀಕರಿಸಿರುವ ಸಾಫ್ಟ್‌ವೇರ್‌ಗಳನ್ನೇ ನಮ್ಮ ಬ್ಯಾಂಕ್‌ನಲ್ಲಿ ಬಳಕೆ ಮಾಡಲಾಗುತ್ತಿದೆ ಎಂದರು.
ಸಾಲ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವವರು ತಪ್ಪಿತಸ್ಥರು ಎಂದು ಸಾಬೀತಾದರೆ ರಘುಪತಿ ಭಟ್ ಅವರು ಸಾಲಗಾರರ ಜವಾಬ್ದಾರಿಯನ್ನು ವಹಿಸಿಕೊಂಡು, ಅವರ ಸಾಲದ ಮೊತ್ತವನ್ನು ಪಾವತಿಸಲು ಸಿದ್ಧರಿದ್ದಾರಾ. ಒಂದು ವೇಳೆ ಆರೋಪ ಮಾಡಿದಂತೆ 1013 ಮಂದಿಗೆ ಅನ್ಯಾಯವಾಗಿದ್ದರೆ ಅವರು ಬ್ಯಾಂಕ್‌ನ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದರು. ಕೆಲವರಷ್ಟೇ ಯಾಕೆ ಆರೋಪ ಮಾಡುತ್ತಿದ್ದಾರೆ ಎಂದೂ ಪ್ರಶ್ನಿಸಿದರು.
ನಮ್ಮ ಸಂಸ್ಥೆಯ ಮೊಹರು ಮತ್ತು ಸಹಿಯನ್ನು ದುರ್ಬಳಕೆ ಮಾಡಿಕೊಂಡು ಪತ್ರವೊಂದನ್ನು ತಿರುಚಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಡಲಾಗಿದೆ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.
ಉಡುಪಿಯ ಕಮಲಾಕ್ಷಿ ವಿವಿಧೋದ್ಧೇಶ ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಧ್ವನಿಯೆತ್ತಲಿದ್ದೇನೆ ಎಂದೂ ಹೇಳಿದರು.
ಬ್ಯಾಂಕ್ ಉಪಾಧ್ಯಕ್ಷ ವಾಸುದೇವ್ ಸಾಲಿಯಾನ್, ವಿನಯ್ ಕರ್ಕೇರಾ, ಮಂಜುನಾಥ ಎಸ್.ಕೆ., ಶಾರಿಕಾ ಕಿರಣ್, ಶರತ್ ಕುಮಾರ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.