ADVERTISEMENT

‘ಸಂಶೋಧನೆ, ಪಾಂಡಿತ್ಯದ ಸಂಗಮ’

ಬನ್ನಂಜೆ ಗೋವಿಂದಾಚಾರ್ಯರಿಗೆ ನುಡಿನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:20 IST
Last Updated 18 ಡಿಸೆಂಬರ್ 2020, 16:20 IST
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಬನ್ನಂಜೆ ಗೋವಿಂದಾಚಾರ್ಯ ಅವರ ನುಡಿನಮನ ಕಾರ್ಯಕ್ರಮ ನಡೆಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಬನ್ನಂಜೆ ಗೋವಿಂದಾಚಾರ್ಯ ಅವರ ನುಡಿನಮನ ಕಾರ್ಯಕ್ರಮ ನಡೆಯಿತು.   

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರದ್ದು ಬೆರಗುಗೊಳಿಸುವ ಪ್ರತಿಭೆ.ಸಂಶೋಧನೆ, ಪಾಂಡಿತ್ಯ ಹಾಗೂ ಸೃಜನಶೀಲತೆಯ ಸಂಗಮ ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಬಣ್ಣಿಸಿದರು.

ಶುಕ್ರವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಸಾರ್ವಜನಿಕ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತ ಶ್ಲೋಕಗಳಿಗೆ ಸಮಾನಾರ್ಥವಾಗಿ ಅಚ್ಚಗನ್ನಡದ ಪದಗಳನ್ನು ಬಳಸುತ್ತಿದ್ದ ಬನ್ನಂಜೆ ಅವರ ಪ್ರತಿಭೆ ವಿಶಿಷ್ಟವಾದುದು. ಉತ್ತಮ ಚಿತ್ರಕಾರರಾಗಿದ್ದ ಬನ್ನಂಜೆಯವರು ಪ್ರವಚನ, ಸಾಹಿತ್ಯ, ಗ್ರಂಥ ರಚನೆಯ ಮಧ್ಯೆ ಅವರ ಚಿತ್ರಕಲೆ ಮರೆಯಾಗಿ ಹೋಯಿತು ಎಂದು ವಿಷಾದಿಸಿದರು.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರಭಾವಕ್ಕೆ ಒಳಗಾಗದೆ ತತ್ವ ಮತ್ತು ತಥ್ಯವನ್ನು ತಿಳಿಯಲು ಬನ್ನಂಜೆ ಅವರು ಒಳಗಣ್ಣು ತೆರೆದು ಸಾಗಿದರು. ಅವರು ಪಂಡಿತ, ಕವಿ ಮಾತ್ರವಲ್ಲದೆ ಸತ್ಯಾನ್ವೇಷಕರಾಗಿದ್ದರು ಎಂದರು.

ADVERTISEMENT

ಮಾತು, ಕೃತಿಯಲ್ಲಿ ಏಕರೂಪದಂತಿದ್ದ ಬನ್ನಂಜೆ, ಯಾರನ್ನೊ ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳಲಿಲ್ಲ. ನಿಷ್ಠುರವಾಗಿ ಸತ್ಯ ಹೇಳುವ ಧೈರ್ಯ ಅವರಲ್ಲಿತ್ತು. ಇದೇ ಕಾರಣದಿಂದ ತತ್ವಬದ್ಧ ಜೀವನ ಸಾಗಿಸಲು ಸಾಧ್ಯವಾಯಿತು ಎಂದರು.

ಬನ್ನಂಜೆ ವಿಚಾರಧಾರೆ ಪಾಶ್ಚಿಮಾತ್ಯರನ್ನು ಸೆಳೆದಿತ್ತು. ವಿಶ್ವದೆಲ್ಲೆಡೆ ಮಧ್ವ ತತ್ವಶಾಸ್ತ್ರದ ಪ್ರಚಾರ ಮಾಡಿದ್ದರು. ಅವರ ಪಾಂಡಿತ್ಯ, ತತ್ವಜ್ಞಾನವನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ನಡೆಯಬೇಕು. ಅದಕ್ಕಾಗಿ ಬನ್ನಂಜೆ ಪ್ರತಿಷ್ಠಾನ ಸ್ಥಾಪನೆಯಾಗಬೇಕು ಎಂದು ಪುತ್ತಿಗೆ ಶ್ರೀಗಳು ಆಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಕಾಲೀನ ಸಮಾಜದಲ್ಲಿ ಬನ್ನಂಜೆಯವರಿಗೆ ಸಮಾನರು ಇರಲಿಲ್ಲ. ಅವರ ವ್ಯಕಿತ್ವ ಮತ್ತು ಕೃತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯವಾಗಲು ದಾಖಲೀಕರಣ ಅಗತ್ಯವಾಗಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು.

ಪೇಜಾವರ ಶ್ರೀಗಳಂತೆ ಬನ್ನಂಜೆ ಗೋವಿಂದಾಚಾರ್ಯರೂ ಉಡುಪಿಗೆ ಕೀರ್ತಿ ತಂದವರು ಹಿಂದೂ ಧರ್ಮ, ಸಂಸ್ಕೃತಿಯೊಳಗಿನ ವಿವಿಧ ಆಯಾಮಗಳ ಸಂಶಯ ನಿವಾರಣೆ ಮಾಡುವಲ್ಲಿ, ಜಿಜ್ಞಾಸೆ, ಟೀಕೆಗಳಿಗೆ ಶಾಸ್ತ್ರದ ಮೂಲಕ ಉತ್ತರ ನೀಡುವಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಸದಾ ಮುಂದಿರುತ್ತಿದ್ದರು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ವಿದ್ವಾಂಸ ರಾಮನಾಥ ಆಚಾರ್ಯ ಹಾಗೂ ಹೆರ್ಗ ರವೀಂದ್ರ ಭಟ್ ನುಡಿನಮನ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಇದ್ದರು. ವಾಸುದೇವ ಭಟ್‌ ಪೆರಂಪಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.