ADVERTISEMENT

‘ಗಾದೆಂತ್ ಕ್ಹೇಳ್ ಮೇಲ್’ ಸಂಪನ್ನ

ಬಂಟಕಲ್ ರಾಜಾಪುರ ಸಾರಸ್ವತ ಸೇವಾ ವೃಂದ, ಶ್ರೀದುರ್ಗಾ ಮಹಿಳಾ ವೃಂದದ ವತಿಯಿಂದ ನಡೆದ ಕೆಸರುಗದ್ದೆ  ಕ್ರೀಡೋತ್ಸವ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 6:32 IST
Last Updated 25 ಜೂನ್ 2024, 6:32 IST
ಕೆಸರುಗದ್ದೆ ಕ್ರೀಡೋತ್ಸವಕ್ಕೆ ಗದ್ದೆಗೆ ಹಾಲೆರೆದದು ಚಾಲನೆ ನೀಡಲಾಯಿತು
ಕೆಸರುಗದ್ದೆ ಕ್ರೀಡೋತ್ಸವಕ್ಕೆ ಗದ್ದೆಗೆ ಹಾಲೆರೆದದು ಚಾಲನೆ ನೀಡಲಾಯಿತು   

ಶಿರ್ವ: ಬಂಟಕಲ್ಲು ಸಮೀಪದ ಸಡಂಬೈಲು ಅನಂತರಾಮ ವಾಗ್ಲೆಯವರ ಕೆಸರುಗದ್ದೆಯಲ್ಲಿ ಬೆಳಿಗ್ಗೆಯಿಂದ ಸ್ವಲ್ಪ ಬಿಸಿಲು, ನಡುನಡುವೆ ಹನಿಹನಿ ತುಂತುರು ಮಳೆಯ ಸಿಂಚನದ ಜೊತೆಗೆ ಮಕ್ಕಳು, ಯುವಕರು, ಯುವತಿಯರು, ಹಿರಿಯರು ಮಹಿಳೆಯರೆನ್ನದೆ ಸಂಘಟಕರು ಏರ್ಪಡಿಸಿದ್ದ ವಿವಿಧ ಸ್ಫರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಿಧಿ ಶೋಧದಲ್ಲಿ ಕೆಸರಲ್ಲಿ ತೆಂಗಿನಕಾಯಿ ಹುಡುಕಾಟ ಅತ್ಯಂತ ರೋಚಕವಾಗಿತ್ತು. ಗದ್ದೆಯಲ್ಲಿ ಹೂತಿದ್ದ ಐದು ಕಾಯಿಗಳನ್ನು ಸ್ಪರ್ಧಿಗಳು ಗದ್ದೆಯಿಡೀ ಹುಡುಕಾಡುತ್ತಿದ್ದ ದೃಶ್ಯ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಪುರುಷರು, ಮಹಿಳೆಯರಿಗೆ ಆಯೋಜಿಸಿದ್ದ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಫರ್ಧೆಯಲ್ಲಿ ಸ್ಪರ್ಧಿಗಳು ದಾರಿ ತಪ್ಪಿ ಎಲ್ಲೆಲ್ಲಿ ಸಾಗುತ್ತಿರುವುದು ಮನರಂಜನೆ ನೀಡುತ್ತಿತ್ತು. ಹಗ್ಗಜಗ್ಗಾಟದಲ್ಲಿ ಪರ–ವಿರೋಧ ತಂಡಗಳ ಬೆಂಬಲಿಗರ ಘೋಷಣೆಗಳು ಸ್ಫೂರ್ತಿ ನೀಡುತ್ತಿತ್ತು.

ಮಹಿಳೆಯರಿಗೆ ಆಯೋಜಿಸಿದ್ದ ತೆಂಗಿನ ಸೋಗೆಯಲ್ಲಿ ಮಡಲು ಹೆಣೆಯುವ ಸ್ಪರ್ಧೆ, ಪುರುಷರಿಗೆ ಬೈಹುಲ್ಲಿನಲ್ಲಿ ಹಗ್ಗೆ ನೇಯುವ ಸ್ಪರ್ಧೆ ಹಳೆಯ ಕಾಲದ ಜೀವನ ಪರಿಚಯಿಸಿತ್ತು. ಕೆಸರಲ್ಲಿ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಕುರ್ಚಿ ಹಿಡಿಯಲು ಸಾಹಸ ಪಡುತ್ತಿರುವುದು ರೋಚಕವಾಗಿತ್ತು. ಹೀಗೆ ವಿವಿಧ ಸ್ಪರ್ಧೆಗಳ ನಡೆದು ಕೊನೆಯಲ್ಲಿ ಏರ್ಪಡಿಸಿದ ‘ಮಳೆಯಲ್ಲಿಯೇ ನೃತ್ಯ’ ಬಹಳ ಆಕರ್ಷಕವಾಗಿತ್ತು. ಇದರ ನೇತೃತ್ವ ವಹಿಸಿದ್ದು ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದ, ಮಹಿಳಾ ವೃಂದದವರು.

ADVERTISEMENT

ಎಲ್ಲರೂ ಅವಿಭಕ್ತ ಕೃಷಿ ಕುಟುಂಬದ ಜೀವನದ ಮಾದರಿಯಂತೆ ಬೆಳಗ್ಗಿನ ಉಪಾಹಾರದಲ್ಲಿ ಕಡ್ಲೆ ಉಪ್ಕರಿ, ಮಸಾಲೆ ಅವಲಕ್ಕಿ, ಚಹಾ, ಮಧ್ಯಾಹ್ನದ ಊಟದಲ್ಲಿ ಕುಚ್ಚಲಕ್ಕಿ ಗಂಜಿ, ಉಪ್ಪಿನಕಾಯಿ, ತಿಮರೆ ಚಟ್ನಿ, ಜೈನ್ ಉಪ್ಪಿನಕಾಯಿ, ಹಲಸಿನಸೋಳೆ, ಹುರುಳಿಕಟ್ಟು, ಮೊಸರು, ಮಜ್ಜಿಗೆ ಮೆಣಸು, ಪಾಯಸ ಸವಿದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್‌ ಕೊ ಬ್ಯಾಂಕ್ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಜಯರಾಮ ಪ್ರಭು ಗಂಪದಬೈಲು, ಉದ್ಯಮಿ ರಾಮಚಂದ್ರ ನಾಯಕ್, ಮಹಿಳಾ ವೃಂದದ ಅಧ್ಯಕ್ಷೆ ಸರಸ್ವತಿ ಪ್ರಭು, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ಉದ್ಯಮಿ ಹರೀಶ್ ನಾಯಕ್ ಹಿರಿಯಡ್ಕ ಭಾಗವಹಿಸಿ‌ದ್ದರು. ಗದ್ದೆಗೆ ಒಂಭತ್ತು ಕಲಶಗಳಲ್ಲಿ ಹಾಲು ಎರೆಯುವ ಮೂಲಕ ಕ್ರೀಡೋತ್ಸವಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಶಿವಾನಂದ ನಾಯಕ್ ಕಡಂಬು, ರಾಮಚಂದ್ರ ನಾಯಕ್, ಶಶಿಧರ ವಾಗ್ಲೆ, ಸರಸ್ವತಿ ಕಾಮತ್, ಪಿಡಿಒ ಶೈಲಜಾ ನಾಯಕ್ ಉಪಸ್ಥಿತರಿದ್ದು, ಕೃಷಿ ಸಾಧಕ ನಿತ್ಯಾನಂದ ನಾಯಕ್ ಪಾಲಮೆ ಅವರನ್ನು ಸನ್ಮಾನಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷ ಕೆ.ಆರ್.ಪಾಟ್ಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ದೇವದಾಸ ಪಾಟ್ಕರ್ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.

ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ ತೆಂಗಿನಸೋಗೆಯಿಂದ ತಟ್ಟಿ ಹೆಣೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು
ಕೆಸರುಗದ್ದೆ ಕ್ರೀಡೋತ್ಸವದಲ್ಲಿ ‌ಹಗ್ಗಜಗ್ಗಾಟದ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.