ADVERTISEMENT

ಉಡುಪಿ | ಉನ್ನತ ಶಿಕ್ಷಣದ ಕನಸಿನ ಆಶಾಕಿರಣ

ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಎ.ಶೇಷಗಿರಿ ಭಟ್ಟ‌
Published 16 ಜುಲೈ 2024, 5:00 IST
Last Updated 16 ಜುಲೈ 2024, 5:00 IST
ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಬ್ರಹ್ಮಾವರ: ಸೀತಾನದಿ ತಟದ ಪ್ರಶಾಂತ ವಾತಾವರಣದಲ್ಲಿ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಗೆ ಬೆಂಬಲವಾಗಿ ಗ್ರಾಮೀಣ ಯುವಜನರ ಉನ್ನತ ಶಿಕ್ಷಣದ ಆಶಾಕಿರಣವಾಗಿ ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊರಹೊಮ್ಮಿದೆ. ಇಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲದೆ ಹೊರ ರಾಜ್ಯದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ವಿಶೇಷ.

ಸುಸಜ್ಜಿತ ಭೌತಶಾಸ್ತ್ರ ಪ್ರಯೋಗಾಲಯ, ಕಂಪ್ಯೂಟರ್ ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ತರಗತಿಗಳು, ವೈಫೈ ವ್ಯವಸ್ಥೆ, ಕ್ರೀಡಾಂಗಣ ಸೇರಿದಂತೆ ಹಲವು ವಿದ್ಯಾರ್ಥಿಸ್ನೇಹಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒಳಗೊಂಡಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕ ವಾತಾವರಣವಿದೆ.

2022–23ನೇ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್‌.ಸಿ ಫಿಸಿಕ್ಸ್ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ವಿ. ಪೂಜಾರಿ ಪ್ರಥಮ ರ್‍ಯಾಂಕ್ ಪಡೆದಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. 2016ರಿಂದ ಇಲ್ಲಿಯವರೆಗೆ ಮಂಗಳೂರು ವಿವಿ ಮಟ್ಟದಲ್ಲಿ 9 ರ್‍ಯಾಂಕ್‌ಗಳು ಬಂದಿರುವುದು ಉತ್ತಮ ಸಾಧನೆ.

ADVERTISEMENT

ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿನ ಸಾಕ್ಷಾತ್ಕಾ ಎಂಬ ಧ್ಯೇಯ ಹೊಂದಿರುವ ಈ ಕಾಲೇಜು 1998–99 ಸಾಲಿನಲ್ಲಿ ದಾನಿ ಬಿ. ಸುಧಾಕರ ಶೆಟ್ಟಿ ವಸುಧಾ ಕೆಮಿಕಲ್ಸ್ ಮುಂಬೈ ಅವರ ಸಹಕಾರದೊಂದಿಗೆ ಆರಂಭಗೊಂಡು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಯುತ್ತಿದೆ.

ಉಡುಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ಎನ್.ಸಿ.ಸಿ. ಘಟಕ ಇರುವ ಏಕೈಕ ಸರ್ಕಾರಿ ಕಾಲೇಜು ಎಂಬ ಖ್ಯಾತಿ ಪಡೆದಿರುವ ಈ ಕಾಲೇಜಿನಲ್ಲಿ ಬಿ.ಎ, ಬಿ.ಬಿ.ಎ, ಬಿ.ಎಸ್‌.ಸಿ, ಬಿ.ಸಿ.ಎ, ಬಿ.ಕಾಂ, ಬಿ.ಎಸ್.ಡಬ್ಲ್ಯು ಹಾಗೂ ಎಂ.ಎಸ್.ಡಬ್ಲ್ಯು, ಎಂ.ಕಾಂ, ಎಂ.ಎಸ್‌ಸಿ ಭೌತವಿಜ್ಞಾನ, ಎಂ.ಎಸ್‌ಸಿ ಗಣಿತಶಾಸ್ತ್ರ, ಎಂ.ಎ ಅರ್ಥಶಾಸ್ತ್ರ ಕೋರ್ಸ್‌ಗಳಿವೆ.

ಕಾಲೇಜಿನ ಉದ್ಯೋಗ ಮಾಹಿತಿ ಘಟಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಉದ್ಯೋಗಗಳಿಗೆ ಬೇಕಾಗುವ ಜ್ಞಾನ, ಕೌಶಲ ಕುರಿತು ತರಬೇತಿ ಕಾರ್ಯಾಗಾರಗಳನ್ನು ನಿಯಮಿತವಾಗಿ ನಡೆಸುತ್ತಿದೆ. ಕಾಲೇಜಿನ ವಿವಿಧ ವಿಭಾಗಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ ನಡೆಸುತ್ತಾ ಬಂದಿರುವ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಬೆಂಬಲವಾಗಿವೆ. ಭಾಷಾ ವಿಭಾಗದಿಂದ ಸಂವಹನ ಸಾಮರ್ಥ್ಯ, ರಂಗ ತರಬೇತಿ ಶಿಬಿರ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ವಿಶಿಷ್ಟ ಎಂಬ ಉದ್ಯಮಶೀಲತಾ ದಿನ, ವಿಜ್ಞಾನ ವಿಭಾಗದಿಂದ ವಿಶೇಷ ವಿಚಾರಗೋಷ್ಠಿಗಳು, ಸಮಾಜಕಾರ್ಯ ವಿಭಾಗದಿಂದ ಬುಡಕಟ್ಟು ಅಧ್ಯಯನ ಶಿಬಿರ, ಮಾನವಿಕ ವಿಭಾಗಗಳಿಂದ ನಡೆಯುವ ವಿಚಾರಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿವೆ.

ಕ್ರಿಯಾಶೀಲವಾಗಿರುವ ಎನ್.ಎಸ್.ಎಸ್, ರೋವರ್ಸ್, ರೇಂಜರ್ಸ್, ಯೂತ್ ರೆಡ್‌ಕ್ರಾಸ್ ಘಟಕಗಳಿದ್ದು, ಸುತ್ತಮುತ್ತಲಿನ ಸಂಘ ಸಂಸ್ಥೆಗಳ ಜತೆಗೂಡಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಕಾಲೇಜು ಮತ್ತು ಸಮುದಾಯದ ನಡುವೆ ಅರ್ಥಪೂರ್ಣ ಸಂಬಂಧ ಏರ್ಪಡಿಸಿದೆ.

ಕಾಲೇಜಿನ ಗ್ರಂಥಾಲಯ ಸುಸಜ್ಜಿತ ಸ್ವತಂತ್ರ ಕಟ್ಟಡ ಹೊಂದಿದ್ದು, 23 ಸಾವಿರ ಪುಸ್ತಕಗಳಿವೆ. ಡಿಜಿಟಲ್ ಲೈಬ್ರರಿ ಸೌಕರ್ಯ ಅಲ್ಲದೆ ವಿಶಾಲ ಅಧ್ಯಯನ ಕೊಠಡಿಗಳನ್ನು ಹೊಂದಿದೆ.  ನ್ಯಾಕ್‌ನಿಂದ ಬಿ++ ಗ್ರೇಡ್ ಪಡೆದಿರುವ ಕಾಲೇಜು, ಪ್ರಸ್ತುತ 650 ವಿದ್ಯಾರ್ಥಿಗಳು, 50 ಬೋಧಕರನ್ನು ಒಳಗೊಂಡಿದೆ. ಬಲಿಷ್ಠವಾದ ಹಳೆವಿದ್ಯಾರ್ಥಿ ಸಂಘವೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ಕಿರಣ್ ಕುಮಾರ್ ಕೊಡ್ಗಿ ಎ, ಅವರ ನಿರಂತರ ಬೆಂಬಲ ಕಾಲೇಜಿನ ಪ್ರಗತಿಗೆ ಪೂರಕವಾಗಿದೆ.

ನಮ್ಮಲ್ಲಿ ಮೂಲಸೌಕರ್ಯಗಳಿಗೆ ಕೊರತೆಯಿಲ್ಲ. ಅಧ್ಯಯನಶೀಲ ಅಧ್ಯಾಪಕ ವೃಂದವಿದೆ. ಇಲ್ಲಿ ವ್ಯಾಸಂಗ ಮಾಡುವ ಹೊರಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿದೆ. ಮಹಿಳಾ ಹಾಸ್ಟೆಲ್ ನಿರ್ಮಾಣ ಹಂತದಲ್ಲಿದೆ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಿದೆ
ರಮೇಶ ಆಚಾರ್ ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.