ADVERTISEMENT

ಕಾಪು: ಪದವಿ ಶಿಕ್ಷಣಕ್ಕೆ ಇಲ್ಲಿದೆ ಉತ್ತಮ ಅವಕಾಶ

ಮೂಲ ಸೌಕರ್ಯಗಳನ್ನು ಹೊಂದಿರುವ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಹಮೀದ್ ಪಡುಬಿದ್ರಿ
Published 9 ಜುಲೈ 2024, 7:40 IST
Last Updated 9 ಜುಲೈ 2024, 7:40 IST
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಕಾಪು (ಪಡುಬಿದ್ರಿ): 30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿರುವ ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಕಲಿಕೆಗೆ ಉತ್ತಮ ವಾತಾವರಣ ಇದೆ.

1992ರಲ್ಲಿ ಹಳೆ ಮಾರಿಗುಡಿಯ ಸಭಾಂಗಣದಲ್ಲಿ ಆರಂಭಗೊಂಡ ಕಾಲೇಜು ಬಳಿಕ ಸ್ಥಳಾವಕಾಶದ ಕೊರತೆಯಿಂದ ಬಂಗ್ಲೆ ಮೈದಾನಕ್ಕೆ ಸ್ಥಳಾಂತರವಾಯಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತ ಮಲ್ಲಾರಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಯಿತು. ಆದರೆ ಅದು ಕಾಪು ಪೇಟೆಯಿಂದ ಬಹಳ ದೂರ ಇರುವುದರಿಂದ, ಬಸ್‌ ಸೌಕರ್ಯ ಸರಿಯಾಗಿ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಯಿತು. ಇದನ್ನು ಮನಗಂಡ ಸರ್ಕಾರ ಕಾಪುವಿನ ಹೃದಯ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಇರುವ ಒಂದು ಎಕ್ರೆ ಜಾಗದಲ್ಲಿ ಕಾಲೇಜು ನಿರ್ಮಿಸಿ 2009–2010ರ ಸಾಲಿನಲ್ಲಿ ಅಲ್ಲಿಗೆ ಸ್ಥಳಾಂತರಿಸಲಾಯಿತು.

ಬಿ.ಎ, ಬಿ.ಕಾಂ, ಬಿ.ಬಿ.ಎ, ಹಿಂದಿ, ಕನ್ನಡ, ಇಂಗ್ಲಿಷ್, ಬಿ.ಎ.ಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಬಿಬಿಎ, ಐಚ್ಚಿಕ ವಿಷಯಗಳನ್ನು ಕಲಿಯಲು ಇಲ್ಲಿ ಅವಕಾಶವಿದೆ. ಕಾಲೇಜು ನ್ಯಾಕ್ ಸಮಿತಿಯಿಂದ ‘ಬಿ’ ದರ್ಜೆಯ ಸ್ಥಾನ ಪಡೆದಿದೆ.

ADVERTISEMENT

ಪ್ರಸ್ತುತ ಕಾಲೇಜಿನಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ಲ್ಯಾಬ್, ವಾಚನಾಲಯ, ಎನ್‌ಎಸ್‌ಎಸ್, ರೇಂಜರ್ಸ್ ರೋವರ್ಸ್‌, ಸ್ಕೌಟ್ ಮತ್ತು ಗೈಡ್ಸ್, ರೆಡ್‌ಕ್ರಾಸ್ ಘಟಕಗಳು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿವೆ. ಜಿಮ್, ವಿದ್ಯಾರ್ಥಿನಿಯರಿಗೆ ಸುಸಜ್ಜಿತ ವಿಶ್ರಾಂತಿ ಕೊಠಡಿಯೂ ಇದೆ.

9 ಉಪನ್ಯಾಸಕರು, 15 ಅತಿಥಿ ಉಪನ್ಯಾಸಕರು ಇದ್ದಾರೆ. ಉದ್ಯೋಗಕ್ಕೆ ಸಂಬಂಧಪಟ್ಟ ವಿವಿಧ ರೀತಿಯ ತರಬೇತಿಗಳು ನಡೆಯುತ್ತಿದ್ದು, ಉದ್ಯೋಗ ಮೇಳವೂ ಕಳೆದ ಬಾರಿ ನಡೆದಿದೆ. ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮ ತರಬೇತಿದಾರರೂ ಕಾಲೇಜಿನಲ್ಲಿ ಇದ್ದಾರೆ.

ವಾಚನಾಲಯಕ್ಕೆ ಹೊಸದಾಗಿ ಕಟ್ಟಡ ನಿರ್ಮಾಣವಾಗಿದ್ದು, ಅದಕ್ಕೆ ಬೇಕಾದ ಪುಸ್ತಕಗಳ ಜೋಡಣೆ ಆಗುತ್ತಿದೆ. ಈಗಾಗಲೇ 15 ಸಾವಿರಕ್ಕೂ ಅಧಿಕ ಪುಸ್ತಕಗಳು ಇದ್ದು, ಇನ್ನೂ ಹೆಚ್ಚಿನ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಸ್ಮಾರ್ಟ್ ತರಗತಿಗಳೂ ಇವೆ.

ಇಲ್ಲಿ ಸ್ಥಳೀಯರಿಗಿಂತ ಹೊರ ಜಿಲ್ಲೆಯ, ಹಾಸ್ಟೆಲ್‌ನಲ್ಲಿರುವ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಜಾಗದ ಕೊರತೆ ಇರುವುದರಿಂದ ಸಮೀಪದಲ್ಲಿರುವ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಿದಲ್ಲಿ ಇನ್ನಷ್ಟು ಜಾಗ ದೊರೆತು ಮೈದಾನ ವಿಸ್ತರಿಸಲು ಸಹಕಾರಿಯಾಗಬಹುದು.

ಒಟ್ಟಾರೆ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿರುವ ಕಾಲೇಜಿನಲ್ಲಿ ಯಾವುದೇ ಕೊರತೆ ಇಲ್ಲ. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಇದ್ದರೂ ಮಕ್ಕಳ ಸಂಖ್ಯೆ ಮಾತ್ರ ವಿರಳವಾಗಿದೆ. ಇದಕ್ಕಾಗಿ ಉಪನ್ಯಾಸಕರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಕಾಲೇಜು ನಿರ್ಮಾಣ, ಅಭಿವೃದ್ಧಿಯಲ್ಲಿ ಮಾಜಿ ಸಚಿವರಾದ ದಿ. ವಸಂತ ಸಾಲ್ಯಾನ್, ವಿನಯ ಕುಮಾರ್ ಸೊರಕೆ, ಲಾಲಾಜಿ ಆರ್‌. ಮೆಂಡನ್ ಅವರ ಪಾತ್ರ ಮಹತ್ವದ್ದು.

ಬಿ.ಸಿ.ಎ ಆರಂಭಿಸುವ ಚಿಂತನೆ
ನಮ್ಮಲ್ಲಿ ಮೂಲಸೌಕರ್ಯಗಳಿಗೆ ಏನೂ ಕೊರತೆ ಇಲ್ಲ. ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಮುಂದೆ ಬಿ.ಸಿ.ಎ ಆರಂಭಿಸುವ ಯೋಜನೆ ಇದೆ. ಇದಕ್ಕೆ ಉಪನ್ಯಾಸಕರು ಕಂಪ್ಯೂಟರ್ ಶಿಕ್ಷಕರ ಅಗತ್ಯ ಇದೆ. ಮುಂದೆ ಆರಂಭಿಸಿದರೆ ಸರ್ಕಾರದಿಂದ ಸೌಕರ್ಯಗಳು ಸಿಗಬಹುದು. ಇಲ್ಲಿ ಹೆಚ್ಚಾಗಿ ಹೊರ ಜಿಲ್ಲೆಯ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮಹಿಳಾ ಹಾಸ್ಟೆಲ್ ಕಾಪುವಿನಲ್ಲಿ ನಿರ್ಮಾಣವಾದರೆ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪ್ರಾಂಶುಪಾಲ ಗೋಪಾಲಕೃಷ್ಣ ಎಂ. ಗಾಂವ್ಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.