ಪಡುಬಿದ್ರಿ: ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ 50ನೇ ವರ್ಷಾಚರಣೆಯಲ್ಲಿರುವ ಜೇಸಿಐ ಪಡುಬಿದ್ರಿ ಆತಿಥ್ಯದಲ್ಲಿ ಬ್ಲೂಫ್ಲ್ಯಾಗ್ ಬೀಚ್ ಮತ್ತು ಪಡುಬಿದ್ರಿ ಬೀಚ್‌ನಲ್ಲಿ ನ. 23 ಹಾಗೂ 24ರಂದು ಬೀಚ್ ಉತ್ಸವ - ‘ಕೋಸ್ಟಲ್ ಕಾರ್ನಿವಲ್ ಪಡುಬಿದ್ರಿ’ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಡುಬಿದ್ರಿ ಜೇಸಿಐ ಅಧ್ಯಕ್ಷ ಸಂಜಿತ್ ಎರ್ಮಾಳು, ‘ವಿವಿಧ ಕ್ರೀಡೆಗಳು, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗಳ ಅನಾವರಣಗೊಳಿಸುವುದಕ್ಕಾಗಿ ‘ಬ್ರ್ಯಾಂಡ್ ಪಡುಬಿದ್ರಿ’ ಮೂಲಕ ಜನರಿಗಾಗಿ ತೆರೆದುಕೊಳ್ಳಲಿರುವ ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕಾ, ಬಂದರು ಸಚಿವ ಮಂಕಾಳ ವೈದ್ಯ 23ರಂದು ಸಂಜೆ 6ಕ್ಕೆ ಉದ್ಘಾಟಿಸುವರು.
ಅಂದು ಬೆಳಿಗ್ಗೆ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ 3 ಹಾಗೂ 5 ಕಿ.ಮೀಗಳ ರಾಷ್ಟ್ರೀಯ ಜೂನಿಯರ್, ಸೀನಿಯರ್ ಮುಕ್ತ ಈಜಿ ಸ್ಪರ್ಧೆ ನಡೆಯಲಿದೆ.
24ರಂದು ಬೆಳಿಗ್ಗೆ ಬರಿಗಾಲಲ್ಲಿ ಸಮುದ್ರ ತೀರದ ಮ್ಯಾರಾಥಾನ್ ಓಟ, ಗಾಳ ಹಾಕಿ ಹಾಗೂ ಸಾಂಪ್ರದಾಯಿಕ ಮೀನು ಹಿಡಿಯುವ ಸ್ಪರ್ಧೆ, ಸಾಹಸಿ ಕ್ರೀಡೆಗಳನ್ನೂ ಆಯೋಜಿಸಲಾಗಿದೆ. ಸ್ಥಳೀಯ ಪ್ರತಿಭೆಗಳ ಅನಾವರಣದೊಂದಿಗೆ ಸಂಜೆ 5ಗಂಟೆಗೆ ಪಡುಬಿದ್ರಿ ಜೇಸಿಐನ 50 ಸಂಭ್ರಮಾಚರಣೆ ನಡೆಯಲಿದೆ. ಜೇಸಿಐ ಇಂಡಿಯಾದ ರವಿ ಶಂಕರ್ ಸತ್ಯಮೂರ್ತಿ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
23ರಂದು ಸಂಜೆ 7ಕ್ಕೆ ಸಂಗೀತ ಪ್ರಸ್ತುತಿ ಇರಲಿದೆ. 24ರಂದು ಸಂಜೆ 7ಗಂಟೆಗೆ ಮೂಡುಬಿದ್ರಿಯ ಆಳ್ವಾಸ್ ಫೌಂಡೇಷನ್ 500 ವಿದ್ಯಾರ್ಥಿಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ, ಪೂರ್ವಾಧ್ಯಕ್ಷರಾದ ಶ್ರೀನಿವಾಸ ಶರ್ಮ, ಜಿತೇಂದ್ರ ಫುರ್ಟಾಡೊ, ರಮೇಶ್ ಯು., ವಿವೇಕ್ ಬಿ.ಎಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.