ADVERTISEMENT

ಮಲ್ಪೆ ಬೀಚ್ ಉತ್ಸವಕ್ಕೆ ಅದ್ಧೂರಿ ತೆರೆ

ರಘು ದೀಕ್ಷಿತ್ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು, ಯಾಟ್‌ ನೋಡಲು ಮುಗಿಬಿದ್ದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 16:28 IST
Last Updated 22 ಜನವರಿ 2023, 16:28 IST
ಮಲ್ಪೆ ಬೀಚ್‌ ಉತ್ಸವದ ಕೊನೆಯ ದಿನವಾದ ಭಾನುವಾರ ಗಮನ ಸೆಳೆದ ಯಾಟ್ ಹಾಗೂ ಫ್ಲೈಬೋರ್ಡ್‌
ಮಲ್ಪೆ ಬೀಚ್‌ ಉತ್ಸವದ ಕೊನೆಯ ದಿನವಾದ ಭಾನುವಾರ ಗಮನ ಸೆಳೆದ ಯಾಟ್ ಹಾಗೂ ಫ್ಲೈಬೋರ್ಡ್‌   

ಉಡುಪಿ: ರಜತ ಮಹೋತ್ಸವದ ಭಾಗವಾಗಿ ಮಲ್ಪೆಯ ಕಡಲ ತೀರದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮಲ್ಪೆ ಬೀಚ್‌ ಉತ್ಸವಕ್ಕೆ ಭಾನುವಾರ ತೆರೆಬಿತ್ತು. ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳ ಸಾವಿರಾರು ಪ್ರವಾಸಿಗರು ಬೀಚ್ ಹಬ್ಬವನ್ನು ಕಣ್ತುಂಬಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಐತಿಹಾಸಿಕ ರಜತ ಉತ್ಸವ–ಬೀಚ್ ಉತ್ಸವವು ಸಾಗರದ ಮಧ್ಯೆ ಜನಸಾಗರ ಸೇರಿಕೊಂಡು ಯಶಸ್ವಿಯಾಗಿ ನಡೆದಿದೆ. ಕೋವಿಡ್‌ನಿಂದ ನಲುಗಿದ್ದ ಪ್ರವಾಸೋದ್ಯಮಕ್ಕೆ ಕ್ಷೇತ್ರಕ್ಕೆ ರಜತ ಮಹೋತ್ಸವ ಚೇತರಿಕೆ ನೀಡಿದೆ ಎಂದರು.

ಮೂರು ದಿನಗಳ ಬೀಚ್ ಉತ್ಸವದಲ್ಲಿ ಚಿತ್ರ ಕಲಾಕೃತಿಗಳ ಸ್ಪರ್ಧೆ, ಉಡುಪಿಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ, ಮರಳು ಶಿಲ್ಪ ರಚನೆ, ಕಬ್ಬಡ್ಡಿ, ಥ್ರೋಬಾಲ್‌, ವಿಭಿನ್ನ ವಾಟರ್‌ ಸ್ಫೋರ್ಟ್ಸ್‌ಗಳು, ಕ್ಲಿಫ್ ಡೈವಿಂಗ್, ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ, ಕಯಾಕಿಂಗ್‌, ಸ್ಕೂಬಾ ಡೈವಿಂಗ್‌, ಯಾಟ್‌ನೊಳಗೆ ಸಂಚರಿಸುವ ವಿಶಿಷ್ಟ ಅನುಭವವನ್ನು ಪ್ರವಾಸಿಗರಿಗೆ ಕೊಡಲಾಗಿದೆ.

ADVERTISEMENT

ರಾಜೇಶ್ ಕೃಷ್ಣನ್‌, ಕುನಾಲ್ ಗಾಂಜಾವಾಲ ಹಾಗೂ ರಘು ದೀಕ್ಷಿತ್ ರಸ ಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿವೆ. ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳು, ಪ್ರಾಯೋಜಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಬೀಚ್ ಉತ್ಸವ ಯಶಸ್ವಿಯಾಗಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, 1997ರಲ್ಲಿ ರಚನೆಯಾದ 9 ನೂತನ ಜಿಲ್ಲೆಗಳಲ್ಲಿ ಉಡುಪಿಯೂ ಒಂದಾಗಿದ್ದು ಅದ್ಧೂರಿಯಾಗಿ ರಜತ ಮಹೋತ್ಸವ ನಡೆಯುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮಲ್ಪೆ ಬೀಚ್‌ನಲ್ಲಿ ಮೊದಲ ಬಾರಿಗೆ ಫ್ಲೈಬೋರ್ಡ್‌, ಕ್ಲಿಫ್ ಡೈವಿಂಗ್ ಹಾಗೂ ಸ್ಕೂಬಾ ಡೈವಿಂಗ್ ಪರಿಚಯಿಸಲಾಗಿದೆ.

ಮುಂಬೈನಿಂದ ಯಾಟ್‌ ಪ್ರವಾಸಿ ಹಡಗನ್ನು ತರಿಸಿ ಪ್ರವಾಸಿಗರಿಗೆ ವಿಭಿನ್ನವಾದ ಅನುಭವ ನೀಡಲಾಗುತ್ತಿದೆ. ಒಂದು ತಿಂಗಳು ಯಾಟ್‌ ಮಲ್ಪೆ ತೀರದಲ್ಲಿ ಇರಲಿದ್ದು ಸದುಪಯೋಗಪಡಿಸಿಕೊಳ್ಳಬೇಕು. ವಾಟರ್‌ ಸ್ಫೋರ್ಟ್ಸ್‌ ಹಾಗೂ ಅಡ್ವೆಂಚರ್ಸ್‌ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಮೀನುಗಾರಿಕೆಯ ಜತೆಗೆ ಪ್ರವಾಸೋದ್ಯಮವನ್ನು ಎತ್ತರಕ್ಕೆ ಬೆಳೆಸಲು ವಿಫುಲ ಅವಕಾಶಗಳಿದ್ದು ಸ್ಥಳೀಯರ ಮನಸ್ಥಿತಿ ಬದಲಾಗಬೇಕು. ಪ್ರವಾಸಿಗರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಎಸ್‌.ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಜಿಲ್ಲಾ ಪಂಚಾಯಿತಿ ಎಚ್.ಪ್ರಸನ್ನ, ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇದ್ದರು.

ಬೀಚ್‌ ಉತ್ಸವದ ಜವಾಬ್ದಾರಿ ವಹಿಸಿಕೊಂಡಿದ್ದ ಅಧಿಕಾರಿಗಳು ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಪ್ರಮುಖರನ್ನು ಸನ್ಮಾನಿಸಲಾಯಿತು.

ಬೀಚ್‌ ಉತ್ಸವ ಕ್ರೀಡೆಗಳ ಫಲಿತಾಂಶ

ಚಿತ್ರಕಲೆ: 1 ರಿಂದ 4ನೇ ತರಗತಿ: ಅಶ್ಚಿತ್ ಆರ್‌.ಶೆಟ್ಟಿಗಾರ್ ಪ್ರಥಮ, ಜೆ.ಎಸ್‌.ನಿಹಾರ್‌ ದ್ವಿತೀಯ, ಸುಘ್ನೇಶ್ ಎಸ್‌.ಸಾಲಿಯಾನ್‌ ತೃತೀಯ, ಸಮಾಧಾನಕರ ಬಹುಮಾನ: ಸಿದ್ಧಿಕ್‌, ಪ್ರಿಯದರ್ಶಿನಿ, ಸೃಷ್ಟಿ ಪೂಜಾರಿ, ಜುಮ್ನಾ, ದೇಶ್ನಾ ಕುಲಾಲ್‌.

5 ರಿಂದ 7ನೇ ತರಗತಿ: ಚಿರಾಗ್ ವಿ.ಶೆಟ್ಟಿ ಪ್ರಥಮ, ಅನ್ವಿತಾ ದ್ವಿತೀಯ, ವಿಶುತಾ ಸಾಮಗ ತೃತೀಯ, ಸಮಾಧಾನಕರ: ಅವನಿ ಮೇಸ್ತ, ಅದಿತಿ, ತನ್ವಿ ಎಸ್‌.ಕೋಟ್ಯಾನ್‌, ರಶ್ಮಿ ಆರ್‌.ಶೆಟ್ಟಿ, ಧೃತಿ. 8ರಿಂದ 10ನೇ ತರಗತಿ: ಅಮೋಘ್ ಕೆ.ಆರ್‌. ಪ್ರಥಮ, ನಿಖಿತ್‌ ದ್ವಿತೀಯ, ಅವೀಶ್ ಸುಂದರ್‌ಪನ್‌ ತೃತೀಯ.

ಕಾಲೇಜು ವಿಭಾಗ: ಗಗನ್ ಜೆ.ಸುವರ್ಣ, ಪ್ರಾಪ್ತಿ ಪ್ರದೀಪ್‌ ದ್ವಿತೀಯ, ಗುರುರಾಜ್ ಎಂ.ಶೇಟ್‌, ಪ್ರತೀಕ್ ಸಾಲಿಯಾನ್‌, ಇಬ್ರಾಹಿಂ ಖಲೀಲ್‌, ಪ್ರಜ್ಞಾ ಆಚಾರ್‌, ಧರಿತ್ರಿ

ಮಹಿಳೆಯರ ಥ್ರೋಬಾಲ್: ಥ್ರೀ ಸ್ಟಾರ್ ಮಲ್ಪೆ–ಪ್ರಥಮ, ಡಿಯರ್ ಫ್ರೆಂಡ್ಸ್ ಕುಡ್ಲ–ದ್ವಿತೀಯ, ಸ್ಪಾರ್ಕ್‌ ಪ್ಲಗ್ಸ್‌ ಉಡುಪಿ–ತೃತೀಯ, ಬೀಚ್‌ ಗರ್ಲ್ಸ್‌ ಹೊಸಬೆಟ್ಟು–ನಾಲ್ಕನೇ ಸ್ಥಾನ

ಪುರುಷರ ಕಬ್ಬಡ್ಡಿ: ಅಜಯ್ ವೀರಮಾರುತಿ ತಂಡ ಪ್ರಥಮ, ತೆಂಕನಿಡಿಯೂರು ಕಾಲೇಜು ದ್ವಿತೀಯ, ತೆಂಕನಿಡಿಯೂರು ಬಿ ಟೀಂ ತೃತೀಯ, ಶ್ರೀರಾಮ ತಂಡ ನಾಲ್ಕನೇ ಸ್ಥಾನ

ಬೆಸ್ಟ್‌ ಆಲ್‌ರೌಂಡರ್: ರಿತೀಶ್ ಸಾಲಿಯನ್‌, ಬೆಸ್ಟ್‌ ಕ್ಯಾಚರ್: ರಮೇಶ್ ತೆಂಕನಿಡಿಯೂರು, ಬೆಸ್ಟ್ ರೈಡರ್; ಸುಮನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.