ಕಾಪು (ಪಡುಬಿದ್ರಿ): ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಪೂರ್ವಭಾವಿಯಾಗಿ ನವದಿನಗಳ ಕಾಲ ಹಮ್ಮಿಕೊಂಡಿರುವ 108 ತಂಡಗಳ ಭಜನಾ ಸಂಕೀರ್ತನೆಗೆ ಭಾನುವಾರ ಚಾಲನೆ ನೀಡಲಾಯಿತು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮಾತನಾಡಿ, ‘ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿ ಸಾಗುತ್ತಿದ್ದು, ಬ್ರಹ್ಮಕಲಶೋತ್ಸವಕ್ಕೂ ಈಗಿನಿಂದಲೇ ಸಿದ್ಧತೆಗಳು ಪ್ರಾರಂಭಗೊಂಡಿವೆ. ಅದಕ್ಕೆ ಪೂರ್ವಭಾವಿಯಾಗಿ ನವದುರ್ಗಾ ಲೇಖನ ಯಜ್ಞ ಹಮ್ಮಿಕೊಂಡಿದ್ದು, ಪ್ರಪಂಚದಾದ್ಯಂತ ಇರುವ ಭಕ್ತರನ್ನು ನವದುರ್ಗಾ ಲೇಖನ ಬರೆಯುವ ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ’ ಎಂದರು.
ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ‘ನವದುರ್ಗಾ ಲೇಖನ ಯಜ್ಞದ ಮೂಲಕ ಎಲ್ಲಾ ಭಕ್ತರಿಗೂ ಅಮ್ಮನ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಮುಂಬೈ ಸಹಿತ ವಿವಿಧೆಡೆ ಸಭೆ ನಡೆಸಿ ಜನರನ್ನು ಜಾಗೃತಿಗೊಳಿಸಲಾಗುತ್ತಿದ್ದು, ಎಲ್ಲೆಡೆ ಪೂರಕ ಸ್ಪಂದನೆ ದೊರಕುತ್ತಿದೆ’ ಎಂದರು.
ನವದುರ್ಗಾ ಲೇಖನ ಯಜ್ಞ ಸಮಿತಿ ಕಾರ್ಯಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ನವದುರ್ಗಾ ಲೇಖನ ಯಜ್ಞದ ಸಿದ್ಧತೆ ಮತ್ತು ಭಜನಾ ಸಂಕೀರ್ತನೆ ಕುರಿತಾಗಿ ಮಾಹಿತಿ ನೀಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮನೋಹರ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಪದಾಧಿಕಾರಿಗಳಾದ ಕೃಷ್ಣ ಪ್ರಸಾದ್ ಅಡ್ಯಂತಾಯ, ಅಶೋಕ್ ಕುಮಾರ್ ಶೆಟ್ಟಿ, ಕೆ.ವಿಶ್ವನಾಥ್, ಹರಿಯಪ್ಪ ಸಾಲ್ಯಾನ್, ಸಂದೀಪ್ ಕುಮಾರ್ ಮಂಜ, ಪ್ರಮುಖರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ಮೋಹನ್ ಬಂಗೇರ, ಶ್ರೀಧರ ಕಾಂಚನ್, ಗೀತಾಂಜಲಿ ಸುವರ್ಣ, ಸಾವಿತ್ರಿ ಗಣೇಶ್, ಶ್ರೀಕರ ಶೆಟ್ಟಿ ಕಲ್ಯ, ಬೀನಾ ವಿ. ಶೆಟ್ಟಿ, ಅನುರಾಧ ಶೆಟ್ಟಿ, ಪ್ರತಿಮಾ ಶೆಟ್ಟಿ, ಹರಿಣಾಕ್ಷಿ ದೇವಾಡಿಗ, ಸರಿತಾ ಶಿವಾನಂದ್, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್, ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ರಮೇಶ್ ಕಲ್ಮಾಡಿ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಸುವರ್ಧನ್ ಉಡುಪಿ ಇದ್ದರು.
ಈಗಾಗಲೇ ನವದುರ್ಗಾ ಲೇಖನ ಯಜ್ಞ ಬರೆಯಲು ಹೆಸರು ನೋಂದಾಯಿಸಿದವರು 29ರಂದು ವಾಗೇಶ್ವರಿ ಪೂಜೆಯಲ್ಲಿ ಭಾಗವಹಿಸಿ, ರಶೀದಿ ತೋರಿಸುವ ಮುಖಾಂತರ ಕ್ಷೇತ್ರದಲ್ಲಿ ಪುಸ್ತಕ ಪಡೆಯಬಹುದು. ಲೇಖನ ಯಜ್ಞ ಬರೆಯಲು ಹೊಸದಾಗಿ ಹೆಸರು ನೋಂದಾಯಿಸುವವರು ಆಯಾ ವಿಧಾನಸಭಾ ಕ್ಷೇತ್ರವಾರು ಸಮಿತಿಗಳ ಮುಖಾಂತರ ಹೆಸರು ನೋಂದಾಯಿಸಿ ಪುಸ್ತಕ ಪಡೆಯಬಹುದು ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಹೇಳಿದರು.
ಕಾಪು ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ 99999 ನವದುರ್ಗಾ ಲೇಖನ ಬರೆಯುವ ಮಹಾಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ನಡೆಸಲಾಗುತ್ತಿದೆ. ಅ. 29ರಂದು ವಾಗೀಶ್ವರಿ ಪೂಜೆ ಮೂಲಕ ಪೇಜಾವರ ಶ್ರೀಗಳು ಹಾಗೂ ಇತರ 8 ಗಣ್ಯರು ನವದುರ್ಗಾ ಲೇಖನ ಬರೆದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಸಿ ನವದುರ್ಗಾ ಲೇಖನದ ಪುಸ್ತಕವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.