ADVERTISEMENT

ಉಡುಪಿ | ಸಂವಿಧಾನ ಉಳಿದರೆ ಶೋಷಿತ ಸಮುದಾಯ ಉಳಿವು: ಮಾವಳ್ಳಿ ಶಂಕರ್‌

ಭೀಮ ಶಕ್ತಿ ಸಮಾವೇಶದಲ್ಲಿ ಮಾವಳ್ಳಿ ಶಂಕರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 2:40 IST
Last Updated 11 ನವೆಂಬರ್ 2024, 2:40 IST
ಭೀಮ ಶಕ್ತಿ ಸಮಾವೇಶದಲ್ಲಿ ಮಾವಳ್ಳಿ ಶಂಕರ್‌ ಮಾತನಾಡಿದರು
ಭೀಮ ಶಕ್ತಿ ಸಮಾವೇಶದಲ್ಲಿ ಮಾವಳ್ಳಿ ಶಂಕರ್‌ ಮಾತನಾಡಿದರು   

ಉಡುಪಿ: ಸಂವಿಧಾನ, ಪ್ರಜಾಪ್ರಭುತ್ವ ಉಳಿದರೆ ಮಾತ್ರ ಶೋಷಿತ ಸಮುದಾಯಗಳು ಉಳಿಯಲಿವೆ. ಇಲ್ಲದಿದ್ದರೆ ಮನುಸ್ಮೃತಿ ನಮ್ಮ ಮೇಲೆ ದಾಳಿ ಮಾಡಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಪ್ರತಿಪಾದಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ಜಿಲ್ಲಾ ಸಮಿತಿ ವತಿಯಿಂದ ಆದಿ ಉಡುಪಿಯ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಮ ಶಕ್ತಿ ಸಮಾವೇಶ ಮತ್ತು ಉಡುಪಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ದಲಿತ ಚಳುವಳಿಯು ನಿರ್ದಿಷ್ಟ ಜಾತಿಗೆ ಸೇರಿದ ಚಳುವಳಿಯಲ್ಲ. ಸಮಾಜದಲ್ಲಿ ಯಾರು ದೌರ್ಜನ್ಯಕ್ಕೆ ಒಳಗಾಗುತ್ತಾರೋ, ಕೋಮುವಾದ, ಜಾತಿ, ಧರ್ಮಕ್ಕೆ ಬಲಿಪಶುಗಳಾಗುತ್ತಾರೋ ಅವರ ಪರವಾದ ಚಳುವಳಿ ಎಂದರು.

ದಲಿತ ನಾಯಕರು ವೈಚಾರಿಕ ಚಿಂತನೆಯ ಮೂಲಕ ಗ್ರಾಮ ಗ್ರಾಮಗಳಲ್ಲಿ ಹೋರಾಟವನ್ನು ಗಟ್ಟಿಗೊಳಿಸಬೇಕು. ಕಾರ್ಯಕರ್ತರೇ ನಮ್ಮ ಚಳುವಳಿಯ ಜೀವಾಳ. ಎಲ್ಲಿ ನಾಯಕತ್ವ ವಿಜೃಂಭಿಸುತ್ತದೆಯೋ ಅಲ್ಲಿ ಚಳುವಳಿ ದುರ್ಬಲವಾಗುತ್ತದೆ. ಇಂದು ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆದರೆ ಆಳುವವರು ಧರ್ಮವನ್ನು ಮುಂದಿಟ್ಟುಕೊಂಡು ಅದನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಬ್ರಿಟಿಷರು ಭಾರತಕ್ಕೆ ಬಾರದೆ ಹೋಗುತ್ತಿದ್ದರೆ ಕೆಳ ವರ್ಗದವರ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು. ಅಂಬೇಡ್ಕರ್‌ ಹೋರಾಟವನ್ನು ಧಮನಿಸಲು ಆರ್‌ಎಸ್‌ಎಸ್‌ ಹುಟ್ಟಿಕೊಂಡಿತ್ತು. ದೇಶಪ್ರೇಮದ ಹೆಸರಿನಲ್ಲಿ ಇಂದು ಏನು ನಡೆಯುತ್ತಿದೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜಾತ್ಯತೀತ ದೇಶದಲ್ಲಿ ಜಾತಿ ಸಮೀಕ್ಷೆ ಯಾಕೆ ಬೇಕು ಎಂದು ಕೆಲವರು ಕೇಳುತ್ತಿದ್ದಾರೆ. ಜಾತಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್‌ ಕೂಡ ಸೂಚನೆ ನೀಡಿದೆ. ಸಂವಿಧಾನದ ಆಧಾರದಲ್ಲಿ ದೇಶವು ಮುನ್ನಡೆಯುತ್ತಿದೆ ಹೊರತು ಧರ್ಮ ಸಂಸತ್‌ನಿಂದಲ್ಲ ಎಂದು ಶಂಕರ್‌ ಪ್ರತಿಪಾದಿಸಿದರು.

ಜಾತಿ ಸಮೀಕ್ಷೆ ಯಾಕೆ ಬೇಕು ಎಂದು ಪ್ರಶ್ನಿಸುವ ನೀವು ಸಂವಿಧಾನದಲ್ಲಿ ಹೇಳದ ಶೇ 10ರಷ್ಟು ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದೀರಿ ಅದನ್ನು ವಾಪಸ್‌ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ಇಂದು ವಿಭಜನಕಾರಿ ಶಕ್ತಿಗಳು ಜನರನ್ನು ತುಳಿಯುತ್ತಿವೆ. ಅದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ನಾವು ತಿನ್ನುವ ಪ್ರತಿ ಅನ್ನದ ಅಗಳಿನಲ್ಲೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬೆವರಿದೆ. ಯುವ ಜನತೆ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.

ದಲಿತ ಲೇಖಕರ ಕಲಾವಿದರ ಒಕ್ಕೂಟದ ರಾಜ್ಯ ಸಂಚಾಲಕ ಗ.ನ. ಅಶ್ವಥ್ ಮಾತನಾಡಿ, ಇಂದು ನಮ್ಮನ್ನು ಆಳುತ್ತಿರುವ ಕೇಂದ್ರ ಸರ್ಕಾರವು ಪ್ರಶ್ನೆ ಮಾಡುವವರನ್ನು ಮಟ್ಟಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.

ರಾಜ್ಯ ಸಂಘಟನಾ ಸಂಚಾಲಕ ಸುಂದರ್‌ ಮಾಸ್ತರ್‌, ಮಲ್ಲೇಶ್ ಅಂಬುಗ ಹಾಸನ, ಕರುಣಾಕರ ಮಾಸ್ತರ್‌ ಮಲ್ಪೆ, ಸುಂದರ್‌ ಗುಜ್ಜರ್‌ಬೆಟ್ಟು, ಎಸ್‌.ಎಸ್‌. ಪ್ರಸಾದ್‌, ಹೂವಪ್ಪ ಮಾಸ್ತರ್‌, ಗೀತಾ ಸುರೇಶ್‌ ಕುಮಾರ್‌ ಇದ್ದರು. ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮ್‌ರಾಜ್‌ ಬಿರ್ತಿ ಸ್ವಾಗತಿಸಿದರು. ಗಣೇಶ್‌ ಗಂಗೊಳ್ಳಿ ನಿರೂಪಿಸಿದರು. ಜನಪದ ಕಲಾವಿದ ಶಂಕರ್‌ದಾಸ್‌ ಚೇಂಡ್ಕಳ, ರವಿ ಬನ್ನಾಡಿ ಅವರು ಹೋರಾಟದ ಹಾಡುಗಳನ್ನು ಹಾಡಿದರು.

ದಲಿತರ ಮೇಲಿನ ದೌರ್ಜನ್ಯ ತಡೆಗೆ ಸಂಘಟಿತವಾದ ಹೋರಾಟ ಅಗತ್ಯ. ಗ್ರಾಮಗಳಲ್ಲಿ ವೈಚಾರಿಕವಾಗಿ ಚಳುವಳಿಗಳನ್ನು ಕಟ್ಟುವ ಕೆಲಸವಾಗಬೇಕು
ಮಾವಳ್ಳಿ ಶಂಕರ್‌ ದಸಂಸ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.