ADVERTISEMENT

ಆರ್‌ಎಸ್‌ಎಸ್‌ಗೆ ದೇಶಭಕ್ತಿಯ ಪಾಠದ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 14:10 IST
Last Updated 13 ಆಗಸ್ಟ್ 2022, 14:10 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ಆರ್‌ಎಸ್‌ಎಸ್‌ ಮೈ ಮತ್ತು ಮನಸ್ಸಿನಲ್ಲಿ ರಾಷ್ಟ್ರಭಕ್ತಿ ತುಂಬಿದ್ದು ಕಾಂಗ್ರೆಸ್‌ನಿಂದ ದೇಶ ಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಶನಿವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ರಾಷ್ಟ್ರಧ್ವಜದ ವಿಚಾರದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ ಕ್ಷುಲ್ಲಕವಾಗಿ ಮಾತನಾಡುತ್ತಿದ್ದು, ಕೈ ನಾಯಕರ ಮನಸ್ಸು ಕಲುಷಿತಗೊಂಡಿದೆ. ಆರ್‌ಎಸ್‌ಎಸ್‌ ರಾಷ್ಟ್ರದ ರಕ್ಷಣೆ, ಉಳಿವು, ದೇಶಭಕ್ತಿ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್‌ನಿಂದ ದೇಶಪ್ರೇಮದ ಬಗ್ಗೆ ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.

ಚೀನಾ, ಪಾಕಿಸ್ತಾನದ ಜತೆಗೆ ಕೈಜೋಡಿಸಿ ಭಾರತವನ್ನು ಅವಹೇಳನ ಮಾಡುವವರಿಂದ ದೇಶಪ್ರೇಮ ಕಲಿಯಬೇಕಿಲ್ಲ. ಕಾಂಗ್ರೆಸ್‌ ಪಕ್ಷ ಕ್ಷುಲ್ಲಕ ರಾಜಕಾರಣ ಬಿಟ್ಟು ಮೊದಲು ದೇಶಭಕ್ತಿಯ ಪಾಠ ಕಲಿಯಲಿ ಎಂದು ಶೋಭಾ ಹೇಳಿದರು.

ADVERTISEMENT

ತ್ರಿವರ್ಣ ಧ್ವಜ ಜಾತಿ, ಧರ್ಮದ ಸಂಕೇತವಲ್ಲ, ಭಾರತೀಯರ ಸ್ವಾಭಿಮಾನದ ಸಂಕೇತ. ಯುವ ಜನತೆ, ಮಕ್ಕಳು ಸೇರಿ ಎಲ್ಲರೂ ತ್ರಿವರ್ಣ ಹಿಡಿದು ಸಂಭ್ರಮಿಸುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಟ್ಟಿದ್ದಾರೆ. ರಾತ್ರಿ ರಾಷ್ಟ್ರಧ್ವಜವನ್ನು ಹಾರಿಸುವಂತಿಲ್ಲ, ಬಟ್ಟೆಯ ಧ್ವಜ ಮಾತ್ರ ಹಾರಿಸಬೇಕು ಎಂಬ ನಿಬಂಧನೆಗಳನ್ನು ಸಡಿಲಗೊಳಿಸಿ ಮೂರು ದಿನ ಯಾವುದೇ ಜಾಗದಲ್ಲಿ, ರಾತ್ರಿ ಹಾಗೂ ಹಗಲಿನ ವೇಳೆಯೂ ಧ್ವಜ ಹಾರಿಸಲು ಅನುಮತಿ ನೀಡಲಾಗಿದೆ.

ಜಾತಿ, ಧರ್ಮಗಳನ್ನು ಮೀರಿ ಎಲ್ಲೆಡೆ ತ್ರಿವರ್ಣ ಧ್ವಜ ಹಾರಾಡುವ ವಿಶ್ವಾಸವಿದ್ದು, ದೇಶಭಕ್ತಿಯ ಮರುಪೂರಣವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮಾಡಲು ಮಾತ್ರ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿದ್ದರು. ರಾಜಕೀಯಕ್ಕೆ ಬಳಸದೆ ವಿಸರ್ಜಿಸುವಂತೆಯೂ ಸಲಹೆಯನ್ನೂ ನೀಡಿದ್ದರು. ಆದರೆ, ಕೆಲವು ನಾಯಕರು ಅಧಿಕಾರಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸದೆ ಉಳಿಸಿಕೊಂಡರು ಎಂದು ಎಂದು ಟೀಕಿಸಿದರು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್‌ಐಎ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನವಾಗುತ್ತಿದೆ. ಕೊಲೆಯ ಹಿಂದಿರುವವರು ಯಾರು, ಕುಮ್ಮಕ್ಕು ಕೊಟ್ಟವರು ಯಾರು, ಹಣಕಾಸಿನ ನೆರವು ನೀಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಕೇಂದ್ರದ ಗೃಹ ಇಲಾಖೆ ಜತೆ ನಿರಂತರ ಸಂಪರ್ಕದಲ್ಲಿದ್ದು ಅಪರಾಧಿಗಳ ಬಂಧನಕ್ಕೆ ಹಾಗೂ ಕಠಿಣ ಶಿಕ್ಷೆಗೆ ಮನವಿ ಮಾಡಲಾಗಿದೆ ಎಂದು ಶೋಭಾ ಹೇಳಿದರು.

ಪರೇಶ್ ಮೇಸ್ತನ ಸಾವಿನ ಪ್ರಕರಣದ ಆರೋಪಿಗೆ ಬಿಜೆಪಿ ಮಣೆ ಹಾಕಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು ನಿಜವೇ ಆಗಿದ್ದರೆ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಪರೇಶ್ ಮೇಸ್ತನ ಸಾವಿನಲ್ಲಿ ಬಿಜೆಪಿ ಹೋರಾಟ ಮಾಡಿದ್ದು, ಮೃತನ ಕುಟುಂಬದವರ ಮನಸ್ಸಿಗೆ ಘಾಸಿಯಾಗುವಂತಹ ಘಟನೆಗಳು ನಡೆಯಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.