ADVERTISEMENT

ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷೆ ಬಿಜೆಪಿಯಿಂದ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 4:53 IST
Last Updated 3 ಜುಲೈ 2024, 4:53 IST

ಉಡುಪಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಕ್ಕೆ ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಡಿ.ನಾಯ್ಕ್‌ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಪಂಚಾಯಿತಿಗೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಸದಸ್ಯರ ಗಮನಕ್ಕೆ ತಾರದೆ ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬಿಜೆಪಿ ಉಡುಪಿ ನಗರ ಘಟಕ ಅಧ್ಯಕ್ಷ ದಿನೇಶ್‌ ಅಮೀನ್‌ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರು, ನಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವುದಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಶೋಭಾ ಅವರನ್ನು ಉಚ್ಚಾಟಿಸಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ದೂರು ನೀಡಿದ್ದ ಸದಸ್ಯರು: ಕಸ ಸಂಗ್ರಹಣೆ, ವಿಲೇವಾರಿ ಘಟಕದ ಕಸ, ಗ್ರಾಮಕ್ಕೆ ನೀರು ಪೂರೈಕೆಯಾಗುವ ಬೋರ್‌ವೆಲ್‌ ಬಳಿ ಹೂತು ಹಾಕಿರುವುದರಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದು ಆರೋಪಿಸಿ ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಸದಸ್ಯರು ಈಚೆಗೆ ಶೋಭಾ ಅವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಸದಸ್ಯರ ಗಮನಕ್ಕೆ ತಾರದೆ, ಸಭೆಯಲ್ಲಿ ಚರ್ಚಿಸದೆ, ಹೊಂಡ ಮಾಡಿ ಕಸವನ್ನು ಹೂತು ಹಾಕಲು ಅನುವು ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.