ಉಡುಪಿ: ಸ್ವಂತ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದು ಬೀದಿಪಾಲಾಗಿರುವ ಹೆಬ್ರಿಯ ಮುದ್ರಾಡಿ ನಿವಾಸಿ ಭೋಜಶೆಟ್ಟಿಗೆ (77) ಮಾಶಾಸನ ನೀಡುವಂತೆ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿ ಆದೇಶಿಸಿದ್ದರೂ ಪಾಲನೆಯಾಗಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಆರೋಪಿಸಿದರು.
ಮಂಗಳವಾರ ಕುಂಜಿಬೆಟ್ಟು ವೈಕುಂಠ ಕಾನೂನು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದುಕೊಟ್ಟಿರುವ ಭೋಜಶೆಟ್ಟಿ ಇಳಿವಯಸ್ಸಿನಲ್ಲಿ ನ್ಯಾಯಕ್ಕಾಗಿ ಅಲೆಯುವಂತಾಗಿದೆ ಎಂದರು.
ಏನಿದು ಪ್ರಕರಣ ?
1995ರಲ್ಲಿ ಪತ್ನಿ ಹಾಗೂ ಮಕ್ಕಳ ಇಚ್ಚೆಯಂತೆ ಭೋಜಶೆಟ್ಟಿ ತನ್ನ ಹೆಸರಿನಲ್ಲಿದ್ದ ಕೃಷಿ ಭೂಮಿ ಹಾಗೂ ಮನೆಯನ್ನು ಮಕ್ಕಳ ಹೆಸರಿಗೆ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಕರಾರಿನಂತೆ ಜೀವನ ನಿರ್ವಹಣೆಗೆ ಪ್ರತಿ ತಿಂಗಳು ಹಣ ಪಡೆಯುತ್ತಿದ್ದರು.
ಕರಾರಿನ ಎರಡು ವರ್ಷಗಳ ನಂತರ ಮಕ್ಕಳು ಹಣ ಕೊಡುವುದನ್ನು ನಿಲ್ಲಿಸಿದರು. ಪರಿಣಾಮ ಜೀವನ ನಿರ್ವಹಣೆಗೆ ತೊಂದರೆಯಾಯಿತು. ಅನಾರೋಗ್ಯದಿಂದ ಆರ್ಥಿಕ ಸಮಸ್ಯೆಯೂ ಹೆಚ್ಚಾಯಿತು. ಇದರಿಂದ ನೊಂದ ಭೋಜಶೆಟ್ಟಿಮಕ್ಕಳಿಂದ ಮಾಶಾಸನ ಕೊಡಿಸುವಂತೆ 2016ರಲ್ಲಿ ಹೆಬ್ರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪ್ರಯೋಜನವಾಗಲಿಲ್ಲ.
2018ರ ಅಕ್ಟೋಬರ್‌ನಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದ ಬಳಿಕ ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ನಿರ್ವಹಣಾ ಮಂಡಳಿಗೆ ದೂರು ನೀಡಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮಂಡಳಿ 2019ರ ಡಿಸೆಂಬರ್‌ನಲ್ಲಿ ಐದು ಜನ ಗಂಡು ಮಕ್ಕಳು ತಿಂಗಳಿಗೆ ತಲಾ ₹ 2 ಸಾವಿರ ಮಾಶಾಸನ ನೀಡಬೇಕು. ವಾಸಕ್ಕೆ ಬಾಡಿಗೆ ಮನೆ ವ್ಯವಸ್ಥೆ ಮಾಡಬೇಕು ಎಂದು ಆದೇಶ ನೀಡಿತು.
ಆದರೆ, ಆದೇಶ ಬಂದು ತಿಂಗಳಾದರೂ ಭೋಜಶೆಟ್ಟಿಯ ಬ್ಯಾಂಕ್ ಖಾತೆಗೆ ಮಕ್ಕಳು ಹಣ ಜಮೆ ಮಾಡಿಲ್ಲ. ಇದೀಗ ಅವರು ಆದೇಶ ಪಾಲನೆಗಾಗಿ ನ್ಯಾಯಮಂಡಳಿಯಿಂದ ನೇಮಕವಾದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗೆ ದೂರು ಅರ್ಜಿ ಸಲ್ಲಿಸಿದ್ದಾರೆ ಪ್ರಕರಣವನ್ನು ವಿವರವಾಗಿ ತಿಳಿಸಿದರು ಶಾನುಭಾಗ್.
ಸುದ್ದಿಗೋಷ್ಠಿಯಲ್ಲಿಭೋಜಶೆಟ್ಟಿ, ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಕಣಿವೆ ಇದ್ದರು.
‘ಹೋಟೆಲ್ ಉದ್ಯಮದಲ್ಲಿ ಮಕ್ಕಳು’
ಭೋಜಶೆಟ್ಟಿ ಅವರಿಗೆ ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದರೆ, ಮೂವರು ಪುತ್ರರು ಮುಂಬೈ, ಗೋವಾಗಳಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಇಬ್ಬರು ಮಕ್ಕಳು ಊರಿನಲ್ಲಿದ್ದಾರೆ. ಆಸ್ತಿಯನ್ನು ಮಕ್ಕಳಿಗೆ ಕೊಟ್ಟು ವೃದ್ಧಾಪ್ಯದಲ್ಲಿ ನೋವು ಅನುಭವಿಸುವಂತಾಗಿದೆ ಎಂದು ರವೀಂದ್ರನಾಥ್ ಶಾನುಭಾಗ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.