ADVERTISEMENT

ಯಕ್ಷ‌ ಪ್ರಸಾಧಕ ಹಂದಾಡಿ‌ ಬಾಲಕೃಷ್ಣ ನಾಯಕ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 4:18 IST
Last Updated 5 ಜುಲೈ 2024, 4:18 IST
ಬಾಲಕೃಷ್ಣ ನಾಯಕ್
ಬಾಲಕೃಷ್ಣ ನಾಯಕ್   

ಬ್ರಹ್ಮಾವರ: ಬಡಗುತಿಟ್ಟಿನ ಯಕ್ಷಗಾನ ಪ್ರಸಾಧನ‌ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76) ಗುರುವಾರ ನಿಧನರಾದರು.

ಎಳೆಯ ವಯಸ್ಸಿನಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಹಂದಾಡಿಯ ಸುಬ್ಬಣ್ಣ ಭಟ್‌ ಅವರಲ್ಲಿ ಕಲಿತ ಬಾಲಕೃಷ್ಣ ಅವರು, ಪ್ರೌಢಶಾಲೆ ಮುಗಿಯುತ್ತಿದ್ದಂತೆ ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘ, ಅಜ್ಜ ಚಂದು ನಾಯಕರ ಪ್ರೋತ್ಸಾಹದಿಂದ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಆದರೆ, ಇವರನ್ನು ಸೆಳೆಸಿದ್ದು ಪ್ರಸಾಧನ ಕಲೆ. ಮುಂದೆ ವೇಷ ಕಟ್ಟುವ, ಬಣ್ಣಗಾರಿಕೆ ಕಲಿತು ಅದರಲ್ಲಿ ತೊಡಗಿಸಿಕೊಂಡರು. ‌

ಮಾವ ಉಪೇಂದ್ರ ನಾಯಕರಲ್ಲಿ ವೇಷಭೂಷಣ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಂಡು, 1993ರಲ್ಲಿ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆ ಸ್ಥಾಪಿಸಿ ಯಕ್ಷಗಾನ ಕ್ಷೇತ್ರದಲ್ಲಿ ಬಾಲಣ್ಣನೆಂದೇ ಹೆಸರುವಾಸಿಯಾಗಿದ್ದರು.

ADVERTISEMENT

ಹಿಂದೆ ಬಳಸುತ್ತಿದ್ದ ಅಟ್ಟೆ ಮುಂಡಾಸು, ಅಟ್ಟೆ ಕೇದಲೆ ಮುಂದಲೆಗಳನ್ನು ಕಟ್ಟಿ ಪಾತ್ರಗಳನ್ನು ಸಜ್ಜುಗೊಳಿಸುವಲ್ಲಿ ಇವರು ನಿಷ್ಣಾತರಾಗಿದ್ದರು. ಪ್ರಸಾಧನ ಕಲೆ ಕಲಿಯಲು ಬಯಸುವವರಿಗೆ ಪ್ರತಿಫ‌ಲಾಪೇಕ್ಷೆ ಇಲ್ಲದೆ ಕಲಿಸುತ್ತಿದ್ದ ಬಾಲಣ್ಣ ಬಹಳಷ್ಟು ಜನರಿಗೆ ದಾರಿದೀಪವಾಗಿದ್ದರು. 45 ವರ್ಷಗಳಿಂದ ಪ್ರಸಾಧನ ಕಲೆಗೆ ತನ್ನನ್ನು ಅರ್ಪಿಸಿಕೊಂಡಿದ್ದ ಇವರು ದೇಶ-ವಿದೇಶಗಳಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳಿಗೆ ವೇಷಭೂಷಣ ಒದಗಿಸಿದ್ದಾರೆ.

ಅವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ ಬ್ರಹ್ಮಾವರದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.