ಬ್ರಹ್ಮಾವರ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲ್ಲೂಕು ಘಟಕದ ನೇತೃತ್ವದಲ್ಲಿ 3ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪೇತ್ರಿ ಚೇರ್ಕಾಡಿಯ ಸಮೃದ್ಧಿ ಮಹಿಳಾ ಮಂಡಳಿಯ ಸಹಕಾರದಲ್ಲಿ ಪೇತ್ರಿ ಚೇರ್ಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿ.ಚಂದ್ರಶೇಖರ ಕೆದ್ಲಾಯ ವೇದಿಕೆಯಲ್ಲಿ ಶನಿವಾರ (ಮಾ.4) ನಡೆಯಲಿದೆ.
ಸಾಂಸ್ಕೃತಿಕ ಚಿಂತಕ, ಸಂಶೋಧಕ ಡಾ. ಜಗದೀಶ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನಕ್ಕೆ ಅಂದು ಬೆಳಿಗ್ಗೆ 8.30ಕ್ಕೆ ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಎಸ್. ಭಟ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡುವರು.
9 ಗಂಟೆಗೆ ಸಮ್ಮೇಳನದ ಅಧ್ಯಕ್ಷರನ್ನು ಶೋಭಾಯಾತ್ರೆಯ ಮೂಲಕ ಸ್ವಾಗತಿಸಲಾಗುವುದು. 10ಕ್ಕೆ ಶಾಸಕ ಕೆ.ರಘುಪತಿ ಭಟ್ ಸಮ್ಮೇಳನವನ್ನು ಉದ್ಘಾಟಿಸುವರು. ತಹಶೀಲ್ದಾರ್ ರಾಜಶೇಖರ ಮೂರ್ತಿ ಸಮೃದ್ಧಿ ಕವನ ಗುಚ್ಛ ಬಿಡುಗಡೆ ಮಾಡುವರು. ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಆಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ, ದ.ಕ ಹಾಲು ಒಕ್ಕೂಟದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಮತ್ತಿತರರು ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ಏನು ?
ಮಧ್ಯಾಹ್ನ 12 ಗಂಟೆಗೆ ನೀಲಾವರ ವಿಶ್ವ ಯಕ್ಷ ನೃತ್ಯ ಕಲಾನಿಕೇತನ ತಂಡದವರಿಂದ ಸಾಂಸ್ಕೃತಿಕ ವಲ್ಲರಿ, 12.15ಕ್ಕೆ ಬ್ರಹ್ಮಾವರದ ಶಾಸನಗಳು ವಿಷಯದ ಬಗ್ಗೆ ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ನಿವೃತ್ತ ಇತಿಹಾಸ ಉಪನ್ಯಾಸಕ ಗುರುಮೂರ್ತಿ ಕೆ. ಅವರಿಂದ ಉಪನ್ಯಾಸ, ಮಧ್ಯಾಹ್ನ 1ಕ್ಕೆ ಚೇರ್ಕಾಡಿ ಸರ್ಕಾರಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ವಲ್ಲರಿ, 1.15ಕ್ಕೆ ಕೋಟ ಕನ್ನಡ ಮಾತುಕತೆ ಹರಟೆ, 1.35ಕ್ಕೆ ಯಕ್ಷಗಾನ ಸ್ಥಿತ್ಯಂತರ, 2.30ಕ್ಕೆ ಕ್ರಿಯೇಟಿವ್ ನೃತ್ಯ ತಂಡದವರಿಂದ ಸಾಂಸ್ಕೃತಿಕ ವಲ್ಲರಿ, 2.45ಕ್ಕೆ ಕವಿಗೋಷ್ಠಿ, 3.15ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು, ಸಂಜೆ 4ಕ್ಕೆ ಬೈಕಾಡಿಯ ಮಂದಾರ ಸಾಂಸ್ಕೃತಿಕ ಸೇವಾ ಸಂಘಟನೆ ಅವರಿಂದ ಸಂಕಥನ ಕಾರ್ಯಕ್ರಮಗಳು ನಡೆಯಲಿವೆ.
ಸಮಾರೋಪ: ಸಂಜೆ 4.30ಕ್ಕೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಉಪನ್ಯಾಸಕಿ ಡಾ.ಗುಲಾಬಿ ಪೂಜಾರಿ ಸಮಾರೋಪ ಭಾಷಣ ಮಾಡುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವರು. ಸಮೃದ್ಧಿಯ ಅಧ್ಯಕ್ಷೆ ಪ್ರಸನ್ನ ಪ್ರಸಾದ ಭಟ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿರುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.