ಬೈಂದೂರು: ‘ಕ್ಷೇತ್ರವ್ಯಾಪ್ತಿಯ ಗೋಮಾಳ ಜಾಗ ಸರ್ವೆ ನಡೆಸುವ ಕಾರ್ಯ ಶೀಘ್ರ ಪೂರ್ಣಗೊಳಿಸಿ, ಮುಂದಿನ ಒಂದು ತಿಂಗಳೊಳಗೆ ಕನಿಷ್ಠ ಒಂದಾದರೂ ಗೋಶಾಲೆ ನಿರ್ಮಿಸಬೇಕು’ ಎಂದು ಶಾಸಕ ಗುರುರಾಜ್ ಗಂಟಿಹೊಳೆ ನಿರ್ದೇಶಿಸಿದರು.
ಗೋಮಾಳ ಜಾಗ ಸರ್ವೆ ಪೂರ್ಣಗೊಳಿಸಿದ ಗ್ರಾಮ ಪಂಚಾಯತಿಗಳ ಪಿಡಿಒ ಜೊತೆ ಸಭೆ ನಡೆಸಿದ ಶಾಸಕರು, 80 ಪ್ರತಿಶತ ತಯಾರಿಯಲ್ಲಿರುವ ನಾಡ ಗೋಮಾಳದ ಬಗ್ಗೆ ಮೊದಲು ಚರ್ಚಿಸಿದರು.
ನಾಡಾದಲ್ಲಿ ನೀರಿಗಾಗಿ ಕೆರೆ ನಿರ್ಮಾಣ ಮಾಡಲಾಗಿದ್ದು, ಜೈವಿಕ ಬೇಲಿ ಕೂಡ ನಿರ್ಮಿಸಲಾಗಿದೆ. ಜೈವಿಕ ಬೇಲಿಗೆ ಬಿದಿರು ಮತ್ತು ಸಿಹಿ ಹುಣಸೆ ಗಿಡಗಳನ್ನು ನೆಡಲಾಗುವುದು ಎಂದು ಸೋಶಿಯಲ್ ಫಾರೆಸ್ಟ್ ಅಧಿಕಾರಿಗಳು ತಿಳಿಸಿದರು.
ಹೇರೂರು ಗ್ರಾಮ ಪಂಚಾಯಿತಿ ಗೋಮಾಳದ ಸುತ್ತ ತಾತ್ಕಾಲಿಕ ಧರೆ ನಿರ್ಮಿಸುತ್ತಿರುವ ಕುರಿತು, ಕಂಬದಕೋಣೆ ಗೋಮಾಳದಲ್ಲಿ ಅಕೇಶಿಯ ಮರಗಳಿದ್ದು ಅವುಗಳ ಕಠಾವಿನ ಕುರಿತು ಪಿಡಿಒಗಳು ಹೇಳಿದರು.
ಜೈವಿಕ ಬೇಲಿ ನಿರ್ಮಿಸುವ ದೃಷ್ಟಿಯಿಂದ ಸೋಶಿಯಲ್ ಫಾರೆಸ್ಟ್‌ನವರಿಗೆ ಗೋಮಾಳದ ಸುತ್ತಳತೆಯನ್ನು ಎಲ್ಲಾ ಪಂಚಾಯಿತಿಯವರು ನೀಡುವಂತೆ ಶಾಸಕರು ಸೂಚಿಸಿದರು.
ಕೊಲ್ಲೂರು ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಗೋಮಾಳದ ಕೆಲಸದ ಪ್ರಗತಿಯ ಮಾಹಿತಿ ಪಡೆದುಕೊಂಡು ಕೆಲಸದ ಪ್ರಗತಿ ಹೆಚ್ಚಿಸುವಂತೆ ತಿಳಿಸಲಾಯಿತು.
ನರೇಗಾ ಯೋಜನೆಯಲ್ಲಿ ₹35 ಲಕ್ಷ ಹಣ ಗೋಶಾಲೆ ಶೆಡ್ ನಿರ್ಮಾಣಕ್ಕೆ ಮೀಸಲಿದ್ದು, ಇದನ್ನು ಉಪಯೋಗಿಸಲು ಕ್ರಿಯಾಯೋಜನೆ ತಯಾರಿ ಮಾಡಲು ಹಾಗೂ ದನಗಳ ಆಹಾರದ ದೃಷ್ಟಿಯಿಂದ ಯಾವೆಲ್ಲ ಗಿಡಗಳು ಹೆಚ್ಚು ಸೂಕ್ತ ಎನ್ನುವುದರ ಬಗ್ಗೆ ಪಶು ವೈದ್ಯಾಧಿಕಾರಿಗಳಲ್ಲಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.