ADVERTISEMENT

ಬೈಂದೂರು | ಕಲುಷಿತ ನೀರು ಸೇವನೆ: 140 ಮಂದಿಗೆ ವಾಂತಿ–ಭೇದಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:18 IST
Last Updated 4 ಅಕ್ಟೋಬರ್ 2024, 14:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉಡುಪಿ: ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕಲ್, ಕರ್ಕಿಕಳಿ ಪರಿಸರದ ಜನರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಒಂದು ವಾರದಲ್ಲಿ 140 ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಪಂಚಾಯಿತಿಯಿಂದ ಸರಬರಾಜಾಗಿದ್ದ ಕಲುಷಿತ ನೀರು ಕುಡಿದಿರುವುದರಿಂದ ವಾಂತಿ–ಭೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಸೆಪ್ಟೆಂಬರ್ 29 ರಂದು ಮೂರು ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದವು. ಬಳಿಕ ನಾವು ಆ ಭಾಗದ 375ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ತಪಾಸಣೆ ನಡೆಸಿದಾಗ 140 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ. ಗಡಾದ ತಿಳಿಸಿದರು.

ಜನರಿಗೆ ಆಮಶಂಕೆ ಬಾಧಿಸಿರುವುದು ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ. ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ವಿವರಿಸಿದರು.

ಮಣ್ಣುಮಿಶ್ರಿತ ನೀರು ಕುಡಿದಿರುವುದರಿಂದ ವಾಂತಿ–ಭೇದಿ ಶುರುವಾಗಿದೆ ಎಂದು ಜನರು ತಿಳಿಸಿದ್ದಾರೆ. ಕಲುಷಿತ ನೀರು ಕುಡಿದ ಕಾರಣ ಇದು ಹರಡಿದೆ ಎನ್ನುವುದು ದೃಢಪಟ್ಟಿಲ್ಲ. ಕಲುಷಿತ ನೀರು ಕುಡಿದು ರೋಗ ಬಂದಿದ್ದರೆ, ಇನ್ನಷ್ಟು ಜನರಲ್ಲಿ ಕಾಣಿಸಿಕೊಳ್ಳಬೇಕಿತ್ತು. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಶುಕ್ರವಾರ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ರೋಗ ಕಾಣಿಸಿಕೊಂಡಿದೆ. ಸ್ವಚ್ಛತೆ ಕೊರತೆಯಿಂದ ಈ ರೋಗ ಬರುತ್ತದೆ. ಇದು ಗಂಭೀರ ಸ್ವರೂಪದಲ್ಲ ಎಂದೂ ಅವರು ತಿಳಿಸಿದ್ದಾರೆ.

ಉಪ್ಪುಂದದ ಕಾಸನಾಡಿ ಪರಿಸರದ ಬಾವಿಯಿಂದ ನೀರು ಸರಬರಾಜು ಮಾಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.