ಬೈಂದೂರು: ದ.ಕ. ಜಿಲ್ಲಾ ಹಾಲು ಉತ್ಪಾದನಾ ಘಟಕ ಉನ್ನತ ಸ್ಥಾನದಲ್ಲಿದ್ದು, ಇದಕ್ಕೆ ಉತ್ಪಾದಕರ, ಸಹಕಾರ ಸಂಘಗಳ ಸಹಭಾಗಿತ್ವ, ಪ್ರಾಮಾಣಿಕತೆಯೇ ಕಾರಣ. ಹಾಲಿನ ಶುದ್ಧತೆ, ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ, ಆದ್ಯತೆ ನೀಡುವುದರ ಮೂಲಕ ಹೈನುಗಾರಿಕೆಯಿಂದ ಹೆಚ್ಚು ಲಾಭ ಗಳಿಸಬಹುದು ಎಂದು ದ.ಕ. ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ರಾಜಾರಾಮ ಹೇಳಿದರು.
ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬೈಂದೂರು ಹಾಲು ಉತ್ಪಾದಕರ ಸಹಕಾರ ಸಂಘದ 2023–24ನೇ ಸಾಲಿನ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಮಾತನಾಡಿದ ಅವರು ಸದಸ್ಯರು ಗರಿಷ್ಠ ಹಾಲು ಪೂರೈಸುವಂತೆ ಮನವಿ ಮಾಡಿದರು. ಸರ್ಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ. ನಾರಾಯಣ ರಾವ್ ಮಾತನಾಡಿ, ಸಂಘ ಕಳೆದ ಸಾಲಿನಲ್ಲಿ ₹4.29 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 14 ಡಿವಿಡೆಂಡ್ ನೀಡಲಾಗುವುದು ಎಂದರು.
38 ವರ್ಷಗಳಿಂದ ಕಾರ್ಯ ನಿರ್ವಾಹಣಾ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ಈಚೆಗೆ ನಿವೃತ್ತರಾದ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಈಚೆಗೆ ನಿಧನರಾದ ಮಾಜಿ ಅಧ್ಯಕ್ಷ ಹೊಸಾಡು ಸುಬ್ರಾಯ ಶೇರುಗಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯ ನಿರ್ವಾಹಣಾಧಿಕಾರಿ ಲಲಿತಾ ಪೂಜಾರಿ 2023–24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಮಹಾಬಲೇಶ್ವರ ದೇವಾಡಿಗ, ನಿರ್ದೇಶಕ ಮಂಡಳಿ ಸದಸ್ಯರಾದ ವಿ.ಟಿ. ಅಬ್ರಾಹಂ (ದಾಸ್), ನಾರಾಯಣ ಶೆಟ್ಟಿ ಮದ್ದೋಡಿ, ಮಂಜಪ್ಪ ಎ, ದಾಸಪ್ಪ ಹವಾಲ್ದಾರ್, ನಿತ್ಯಾನಂದ ಎಸ್, ಇಂದಿರಾ ಶೆಡ್ತಿ, ಸಾವಿತ್ರಿ ಶೆಡ್ತಿ ಇದ್ದರು. ಉಪನ್ಯಾಸಕ ಗುರುರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.