ADVERTISEMENT

ಬೈಂದೂರು: ಹೆಚ್ಚಿದ ಬೀಡಾಡಿ ದನಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:07 IST
Last Updated 14 ನವೆಂಬರ್ 2024, 7:07 IST
ಬೈಂದೂರು ವತ್ತಿನೆಣೆ ಹೆದ್ದಾರಿಯಲ್ಲಿ ಗೋವುಗಳು ಮಲಗಿರುವುದು.
ಬೈಂದೂರು ವತ್ತಿನೆಣೆ ಹೆದ್ದಾರಿಯಲ್ಲಿ ಗೋವುಗಳು ಮಲಗಿರುವುದು.   

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲ್ಲೂರು ದೇವಳದ ಗೋಶಾಲೆ ಹೊರತುಪಡಿಸಿ ಬೇರೆ ಯಾವುದೇ ಗೋಶಾಲೆ ಇಲ್ಲದ ಕಾರಣ ಬೀಡಾಡಿ ಜಾನುವಾರುಗಳ ಸಂಖ್ಯೆ ಅಧಿಕವಾಗುತ್ತಿದೆ.

ಇವುಗಳು ಕೃಷಿ ಭೂಮಿಗೆ ನುಗ್ಗಿ ಕೃಷಿಕರ ಬೆಳೆ ಹಾನಿ ಮಾಡುವುದಲ್ಲದೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಪ್ರತಿದಿನ ಸಮಸ್ಯೆ ತಂದೊಡ್ಡುತ್ತಿವೆ. ಇವುಗಳಿಗೆ ಕಡಿವಾಣ ಹಾಕಿ, ಗೋಶಾಲೆ ನಿರ್ಮಿಸಿ ಅವುಗಳನ್ನು ಅಲ್ಲಿಗೆ ಸಾಗಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ.

ಶುಕ್ರವಾರದಂದು ನಡೆಯುವ ಸಂತೆಯ ವೇಳೆ ಇವುಗಳಿಂದ ತಪ್ಪಿಸಿಕೊಂಡು ತರಕಾರಿ ಖರೀದಿಸುವುದೇ ಸವಾಲಾಗಿದೆ. ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಬೀಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆ ಮಧ್ಯದಲ್ಲಿಯೇ ಮಲಗುವುದು, ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ತೊಡಗಿದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ಈಗಾಗಲೇ ಹಲವರು ರಸ್ತೆಯಲ್ಲಿ ಬೀಡಾಡಿ ದನಗಳ ಕಾದಾಟದಿಂದ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ.

ADVERTISEMENT

ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರು ಮಾರ್ಕೆಟ್, ಶಿರೂರು ಪೇಟೆ, ವತ್ತಿನೆಣೆ ತಿರುವು, ಬೈಂದೂರು ಹೊಸ ಬಸ್‌ನಿಲ್ದಾಣ, ಸರ್ಕಾರಿ ಆಸ್ಪತ್ರೆ ಬಳಿ, ಸೇನೇಶ್ವರ ದೇವಸ್ಥಾನದ ಆವರಣ, ಯಡ್ತರೆ ವೃತ್ತ, ಬಿಜೂರು, ಉಪ್ಪುಂದ, ಕಂಬದಕೋಣೆ, ನಾಗೂರು, ಅರೆಹೊಳೆ ಬೈಪಾಸ್, ನಾವುಂದ, ಕಿರಿಮಂಜೇಶ್ವರ, ಮರವಂತೆ, ತ್ರಾಸಿ ಸೇರಿದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲೂ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸಂಚಾರ ಮಾಡುವುದೇ ದುಸ್ತರವಾಗುತ್ತಿದೆ.

ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ. ರಾತ್ರಿ ವೇಳೆ ಕೆಲವೆಡೆ ಬೀದಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯ ವಿಭಜಕಗಳ ಮಧ್ಯೆ, ರಸ್ತೆ ಮಧ್ಯೆ ಮಲಗಿರುವ, ಅಕ್ಕಪಕ್ಕದಲ್ಲಿ ನಿಂತಿರುವ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆ ರಸ್ತೆಯ ಅಕ್ಕಪಕ್ಕದುದ್ದಕ್ಕೂ ಓಡಾಡುತ್ತವೆ. ಇದರಿಂದ ಸವಾರರಿಗೆ ತೊಂದರೆಯಾಗುತ್ತಿದೆ.

ಘನ ವಾಹನಗಳಿಂದ ಅಪಘಾತಕ್ಕೆ ಒಳಗಾಗಿ ಹಲವಾರು ಗೋವುಗಳು ಮೃತಪಟ್ಟಿದ್ದು, ಅವುಗಳನ್ನು ಐ.ಆರ್.ಬಿ.ಯ ಪೆಟ್ರೋಲಿಂಗ್ ಟೀಂನವರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಪ್ರದೇಶದಲ್ಲಿ ಹೂತಿದ್ದಾರೆ. ದಿನಕ್ಕೆ 2ರಿಂದ 3 ದನಗಳು ಅಪಘಾತದಿಂದ ಮೃತಪಟ್ಟಿವೆ ಎಂದು ಐ.ಆರ್.ಬಿ.ಯ ಪೆಟ್ರೋಲಿಂಗ್ ಟೀಂನ ಗಣೇಶ್ ಹೇಳುತ್ತಾರೆ.

ಯಡ್ತರೆಯ ಗ್ಯಾರೇಜ್ ಮಾಲೀಕ ಸಂಜೀವ ದೇವಾಡಿಗ ಅವರು ‘ಪುಣ್ಯಕೋಟಿ ಕುಟೀರ’,  ಗೋಪಾಲ ಪೂಜಾರಿ ವಸ್ರೆ ಎಂಬುವರು ‘ಗಂಟಿಧಾಮ’ ಎಂಬ ಗೋವು ಆರೈಕೆ ಕೇಂದ್ರ ನಡೆಸುತ್ತಿದ್ದಾರೆ. ಆದರೆ ಸೀಮಿತ ಗೋವುಗಳಿಗಷ್ಟೇ ಅವಕಾಶಗಳಿರುವ ಇಲ್ಲಿ ಹೆಚ್ಚಿನ ಗೋವುಗಳ ಆರೈಕೆಗೆ ಮೂಲಸೌಕರ್ಯ ಇಲ್ಲ.

2022 ಜುಲೈ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ರೋಗಿಯನ್ನು ಹಾಗೂ ಅವರ ಕುಟುಂಬಿಕರನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಶಿರೂರು ಟೋಲ್ ಕೇಂದ್ರದ ತುರ್ತು ನಿರ್ಗಮನ ಸಂಚಾರ ಮಾರ್ಗದಲ್ಲಿ ಮಲಗಿದ್ದ ಜಾನುವಾರುಗಳಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು. ಅಪಘಾತದಲ್ಲಿ ಹೊನ್ನಾವರ ಮೂಲದ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. 2023 ಸೆಪ್ಟೆಂಬರ್‌ನಲ್ಲಿ ರಾತ್ರಿ ಗುಡೂರ– ಮಂಗಳೂರು ಬಸ್ ರಾವುತನಕಟ್ಟೆ ಹತ್ತಿರ ರಸ್ತೆ ವಿಭಜಕದ ಮೇಲೆ ಮಲಗಿದ್ದ ಹಸುಗಳು ಅಕಸ್ಮಾತ್ತಾಗಿ ರಸ್ತೆಗೆ ನುಗ್ಗಿದ್ದರಿಂದ ಬಸ್ ರಸ್ತೆಯಿಂದ ಕೆಳಕ್ಕೆ ಇಳಿದಿತ್ತು. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.

ಅರೆಹೊಳೆ ಬೈಪಾಸ್ ಹೆದ್ದಾರಿಯಲ್ಲಿ ಗೋವುಗಳು ಸಾಲು ಸಾಲಾಗಿ ಸಂಚರಿಸಿ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವುದು.
ಬೈಂದೂರು ಕ್ಷೇತ್ರದಲ್ಲಿ ದಾಖಲೆಗಳ ಪ್ರಕಾರ 846 ಎಕರೆ ಗೋಮಾಳದ ಜಾಗ ಇದ್ದು. ಸುಸಜ್ಜಿತ ಗೋಶಾಲೆ ನಿರ್ಮಾಣಕ್ಕಾಗಿ ಗೋಮಾಳ ಜಾಗ ಸರ್ವೇ ಪೂರ್ಣಗೊಳಿಸಿದ ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಹಲವಾರು ಸಭೆ ನಡೆಸಲಾಗಿದ
ಗುರುರಾಜ್ ಗಂಟಿಹೊಳೆ ಬೈಂದೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.