ADVERTISEMENT

ಸಿಎಎ: ಸಂಪುಟದಲ್ಲಿ ಚರ್ಚಿಸಿ ನಿರ್ಧಾರ– ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:48 IST
Last Updated 13 ಮಾರ್ಚ್ 2024, 15:48 IST
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದದ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದದ ಗ್ಯಾರಂಟಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು   

ಉಡುಪಿ: ‘ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗ್ರಾರಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಮಾಡಿದೆ. ಇದು ಚುನಾವಣಾ ಗಿಮಿಕ್ ಅಷ್ಟೆ ಎಂದರು.

‘ನನ್ನ ಹೆಸರಿನಲ್ಲೇ ರಾಮ ಇದ್ದಾನೆ’: ‘ರಾಮನ ಮಂದಿರದಲ್ಲಿ ರಾಮನ ಜತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾನೆ. ಆದರೆ, ಬಿಜೆಪಿ ನಾಯಕರು ರಾಜಕೀಯಕ್ಕಾಗಿ ರಾಮನಿಂದ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿ ಕೇವಲ ಜೈ ಶ್ರೀರಾಮ್ ಘೋಷಣೆ ಕೂಗುತ್ತಾರೆ. ನಾವೆಲ್ಲರೂ ‘ಜೈ ಸೀತಾರಾಮ್’ ಘೋಷಣೆ ಕೂಗೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ADVERTISEMENT

‘ನನ್ನ ಹೆಸರಿನಲ್ಲೇ ರಾಮ ಇದ್ದು ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮೂರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ನಡೆದ ದಿನವೇ ಆಂಜನೇಯನ ಮೂರ್ತಿ ಉದ್ಘಾಟಿಸಿದ್ದೇನೆ. ಹನುಮಂತ ಹುಟ್ಟಿದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಮೀಸಲಿರಿಸಿದ್ದೇನೆ. ರಾಮನ ಭಕ್ತರು ಎಂದು ಹೇಳಿಕೊಳ್ಳುವ ಬಿಜೆಪಿ ಅಂಜನಾದ್ರಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿಲ್ಲ’ ಎಂದು ಲೇವಡಿ ಮಾಡಿದರು.

‘ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳುತ್ತಾರೆ. ಸಂವಿಧಾನ ಬದಲಾವಣೆಯಾದರೆ ಬಡವರು, ಹಿಂದುಳಿದವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಬದುಕಲು ಸಾಧ್ಯವಿಲ್ಲ. ಮತ್ತೆ ಮನುಸ್ಮೃತಿ ಜಾರಿಗೆ ಬರಲಿದೆ. ಜಾತಿ ವ್ಯವಸ್ಥೆ, ಅಸಮಾನತೆ ಅನುಭವಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.