ADVERTISEMENT

ಉಡುಪಿ | ಈಜಿ ಹೊಳೆ ದಾಟಿ ವಿದ್ಯುತ್‌ ತಂತಿ ಜೋಡಿಸಿದ ಮೆಸ್ಕಾಂ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:19 IST
Last Updated 27 ಸೆಪ್ಟೆಂಬರ್ 2024, 5:19 IST
<div class="paragraphs"><p>ಪ್ರಮೋದ್. ವಿ. ಪವರ್ ಮ್ಯಾನ್, ಮೆಸ್ಕಾಂ ಹೆಬ್ರಿ.</p></div>

ಪ್ರಮೋದ್. ವಿ. ಪವರ್ ಮ್ಯಾನ್, ಮೆಸ್ಕಾಂ ಹೆಬ್ರಿ.

   

ಹೆಬ್ರಿ (ಉಡುಪಿ): ಶಿವಪುರದ ಮುರ್ಸಾಲು ಎಂಬಲ್ಲಿ ಈಜಿ ಹೊಳೆ ದಾಟಿ ತುಂಡಾದ ವಿದ್ಯುತ್‌ ತಂತಿಯನ್ನು ಮರುಜೋಡಣೆ ಮಾಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ವಿ. ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಹೊಳೆಯ ಮಧ್ಯದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ, ದಡದಲ್ಲಿರುವ ಮರ ಬಿದ್ದು ತುಂಡಾಗಿತ್ತು. ಮಳೆಯಿಂದಾಗಿ ದುರಸ್ತಿ ಮಾಡಲಾಗದೆ ಹಾಗೇ ಉಳಿದಿತ್ತು. ಆ ಪರಿಸರದ ರೈತರು ವಿದ್ಯುತ್ ಮೋಟಾರ್‌ಗಳನ್ನು ಬಳಸಲಾಗದೆ ಸಮಸ್ಯೆ ಎದುರಿಸುತ್ತಿದ್ದರು. ದಾವಣಗೆರೆ ಜಿಲ್ಲೆ ಚೆನ್ನಗಿರಿಯ ಕಗತೂರು ಗ್ರಾಮದವರಾದ ಹೆಬ್ರಿ ಮೆಸ್ಕಾಂ ಪವರ್‌ಮ್ಯಾನ್‌ ಪ್ರಮೋದ್ ವಿ., ಅರೆಕಾಲಿಕ ಸಿಬ್ಬಂದಿ ಸುಧೀರ್ ಸಹಾಯದೊಂದಿಗೆ ಈಚೆಗೆ ವಿದ್ಯುತ್‌ ಲೈನ್‌ ದುರಸ್ತಿ ಮಾಡಿದ್ದಾರೆ.

ADVERTISEMENT

ಪ್ರಮೋದ್ ವಿ. ಅವರು ವಿದ್ಯುತ್ ತಂತಿಯ ಒಂದು ತುದಿಗೆ ಹಗ್ಗವನ್ನು ಕಟ್ಟಿ ಸುಮಾರು ದೂರಕ್ಕೆ ಈಜಾಡಿಕೊಂಡು ಹೋಗಿ ತುಂಡಾಗಿದ್ದ ತಂತಿಯನ್ನು ದುರಸ್ತಿಗೊಳಿಸಿದ್ದಾರೆ. ಅವರು ಎರಡು ವರ್ಷದ ಹಿಂದೆ ಮೆಸ್ಕಾಂನ ಹೆಬ್ರಿ ಶಾಖೆಗೆ ನೇಮಕಗೊಂಡಿದ್ದರು. ಅವರು ಹೊಳೆಯಲ್ಲಿ ಈಜುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

‘ರೈತರಿಗೆ ಸಕಾಲದಲ್ಲಿ ವಿದ್ಯುತ್ ಒದಗಿಸಬೇಕು ಎಂಬ ಉದ್ದೇಶವಿತ್ತು. ತಂತಿ ನದಿಯ ಮಧ್ಯಭಾಗದಲ್ಲಿದ್ದ ಕಾರಣ ಈಜಿಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಕೆಲವು ದೂರ ಈಜಿಕೊಂಡು ಹೋಗಿ ತಂತಿಯನ್ನು ಮರುಜೋಡಣೆ ಮಾಡಿ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸಿದ್ದೇನೆ’ ಎಂದು ಪ್ರಮೋದ್ ವಿ. ಹೇಳಿದರು.

‘ನಮ್ಮ ಶಾಖೆಯ ಉತ್ತಮ ಕೆಲಸಗಾರರಲ್ಲಿ ಪ್ರಮೋದ್ ಒಬ್ಬರು. ಮಳೆಗಾಲದಲ್ಲಿ ಈ ವರ್ಷ ವಿದ್ಯುತ್ ತಂತಿಯ ದುರಸ್ತಿಗಾಗಿ ಅನೇಕ ಸಾಹಸ ಮಾಡಿದ್ದೇವೆ. ಹೊಳೆ ದಾಟಬೇಕಾದರೆ ಬಹುದೂರ ಕ್ರಮಿಸಬೇಕಾಗಿತ್ತು. ರೈತರಿಗೆ ಸಕಾಲದಲ್ಲಿ ಸೇವೆಯನ್ನು ನೀಡಲು ನದಿಯಲ್ಲಿ ಈಜಿಕೊಂಡು ಹೋಗಿ ತಂತಿ ಮರುಜೋಡಣೆ ಮಾಡಿದ್ದಾರೆ. ಉನ್ನತ ಅಧಿಕಾರಿಗಳು ಅವರ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ’ ಎಂದು ಮೆಸ್ಕಾಂ ಹೆಬ್ರಿ ಶಾಖಾಧಿಕಾರಿ ಲಕ್ಷ್ಮೀಶ್ ಹೇಳಿದರು.

ಹೊಳೆಯಲ್ಲಿ ಈಜಿ ಹೋಗುತ್ತಿರುವ ಪ್ರಮೋದ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.